ಪತ್ತನಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಮಧ್ಯಾಹ್ನ ಪವಿತ್ರ ಮಂಡಲ ಪೂಜೆ ನೆರವೇರಿತು.
ಈ ಮೂಲಕ 41 ದಿನಗಳ ಮೊದಲ ಹಂತದ ವಾರ್ಷಿಕ ಶಬರಿಮಲೆ ಯಾತ್ರೆಗೆ ತೆರೆಬಿದ್ದಿದೆ.
ಸೋಮವಾರ ಸಂಜೆ ಸನ್ನಿಧಾನಂಗೆ ತರಲಾಗಿದ್ದ ಪವಿತ್ರ ಸ್ವರ್ಣ ವಸ್ತ್ರವನ್ನು ಅಯ್ಯಪ್ಪಸ್ವಾಮಿಗೆ ತೊಡಿಸಿದ ಬಳಿಕ ಪ್ರಧಾನ ಅರ್ಚಕರಾದ ಕಂಡರಾರು ರಾಜೀವರು ಅವರು ಮಂಡಲ ಪೂಜೆಯ ವಿಧಾನಗಳನ್ನು ಪೂರ್ಣಗೊಳಿಸಿದರು.
ವಿಶೇಷ ಕಲಭಾಭಿ ಷೇಕಂ ಮತ್ತು ಕಲಶಾಭಿಷೇಕಂ ನಡೆಯು ವಾಗ, ಸರತಿಯಲ್ಲಿ ನಿಂತಿದ್ದ ಮಾಲಾಧಾರಿಗಳು “ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಸ್ತುತಿಸುತ್ತಾ, ಅಯ್ಯಪ್ಪನ ದರ್ಶನ ಪಡೆದರು.
ಮಂಡಲ ಪೂಜೆ ಮುಗಿದ ಕೂಡಲೇ ದೇಗುಲದ ಬಾಗಿಲು ಮುಚ್ಚಲಾಯಿತು. ಸಂಜೆ ಮತ್ತೆ ಬಾಗಿಲು ತೆರೆದು, ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಬಳಿಕ ರಾತ್ರಿ ಮತ್ತೆ ಬಾಗಿಲು ಮುಚ್ಚಲಾಯಿತು. 3 ದಿನಗಳ ಬಳಿಕ ಅಂದರೆ ಡಿ.30ರ ಸಂಜೆ 5 ಗಂಟೆಗೆ ದೇಗುಲ ತೆರೆಯಲಿದ್ದು, ಅಲ್ಲಿಂದ ಯಾತ್ರೆಯ 2ನೇ ಹಂತಕ್ಕೆ ಚಾಲನೆ ಸಿಗಲಿದೆ.