Advertisement
ಪಶ್ಚಿಮಘಟ್ಟ ಸಾಲಿಗೆ ಒಳಪಡುವ ಮಾಂದಲ್ ಪಟ್ಟಿ ಎತ್ತ ನೋಡಿದರೂ ಹಚ್ಚ ಹಸುರಿನ ಕಾಡು ಮತ್ತು ಮಂಜು ತಬ್ಬಿದ ಬೆಟ್ಟ ಶ್ರೇಣಿಗಳನ್ನು ಒಳಗೊಂಡಿದೆ. ಸಹಸ್ರ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಹದ್ದು ಮೀರಿದ ವರ್ತನೆಗಳ ಕಾರಣ ಒಡೆದು ಹಾಕಲಾದ ಮದ್ಯದ ಬಾಟಲಿಗಳ ಚೂರುಗಳು, ಪ್ಲಾಸ್ಟಿಕ್ ಮಾಂದಲ್ ಪಟ್ಟಿಯ ಬೆಟ್ಟದ ನೆತ್ತಿಯ ಮೇಲೆ ಸುರಿಯಲ್ಪಟ್ಟಿದ್ದವು. ಆದರೆ ಮಡಿಕೇರಿ ವಲಯ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ಇದೀಗ ಮಾಂದಲ್ ಪಟ್ಟಿಯ ಸ್ಥಿತಿಯೇ ಬದಲಾಗಿದೆ.
ನ. 1ರಿಂದ ಮಾಂದಲ್ ಪಟ್ಟಿಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಆದರೆ ಮಾಂದಲ್ ಪಟ್ಟಿಯ ಪ್ರವೇಶ ದ್ವಾರದಲ್ಲಿಯೇ ಚೆಕ್‌ಪೋಸ್ಟ್ ಅನ್ನು ಅಳವಡಿಸಿ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್ ತಪಾಸಿಸಿ ಒಳ ಬಿಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ, ಒಳ ತೆರಳುವ ಪ್ರತಿ ವಾಹನವನ್ನು ಕೂಡ ತಪಾಸಣೆ ನಡೆಸುತ್ತಿದ್ದು, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಚಿಪ್ಸ್ ಪ್ಯಾಕೆಟ್‌ಗಳು, ಬೀಡಿ, ಸಿಗರೇಟ್, ಲೈಟರ್, ಮದ್ಯದ ಬಾಟಲಿಗಳು ಇನ್ನಿತರ ಪ್ಲಾಸ್ಟಿಕ್ ಹೊದಿಕೆಯಿಂದ ಕೂಡಿರುವ ಯಾವುದೇ ವಸ್ತುಗಳನ್ನು ಮಾಂದಲ್ ಪಟ್ಟಿ ಒಳಗೆ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಿದೆ.
Related Articles
ನೀರಿನ ಪ್ಲಾಸ್ಟಿಕ್ ಬಾಟಲಿ ಒಯ್ಯುವುದಾದಲ್ಲಿ ಪ್ರತಿ ಬಾಟಲಿಗೆ 50 ರೂ.ನಂತೆ ಪ್ರವೇಶ ದ್ವಾರದಲ್ಲಿ ಠೇವಣಿ ಇಡಬೇಕು. ಹಿಂದಿರುಗುವಾಗ ಬಾಟಲಿ ತೋರಿಸಿದರೆ ಹಣವನ್ನು ಮರಳಿಸಲಾಗುತ್ತದೆ. ಇದರಿಂದ ಮಾಂದಲ್ ಪಟ್ಟಿಯಲ್ಲಿ ಪ್ಲಾಸ್ಟಿಕ್ ಕಸದ ಸಮಸ್ಯೆ ಸಂಪೂರ್ಣ ಹತೋಟಿಗೆ ಬಂದಿದೆ. ನಿಯಮ ಉಲ್ಲಂ ಸಿದರೆ 500 ರೂ. ದಂಡ ವಿಧಿಸಲಾಗುತ್ತದೆ. ಪ್ರವಾಸಿ ಹಾಗೂ ಪರಿಸರಸ್ನೇಹಿ ಕೆಲವು ಕಾಮಗಾರಿಗಳನ್ನು ನಡೆಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುತ್ತದೆ.
– ಪ್ರಭಾಕರನ್, ಡಿಎಫ್ಒ ಮಡಿಕೇರಿ
Advertisement