ರಾಮನಗರ: ಮಂಚನಬೆಲೆ ಜಲಾಶಯವನ್ನು ಪ್ರವಾಸಿಗರ ತಾಣವನ್ನಾಗಿಸುವ ಉದ್ದೇಶವಿದ್ದು, ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸುವ ಚಿಂತನೆ ಸರ್ಕಾರಕ್ಕಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದಲ್ಲಿ ಬಾಗಿನ ಸಮರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಮನರಂಜನೆಯ ಥೀಮ್: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಮನರಂಜನಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ದೋಣಿ ವಿಹಾರ ಸೇರಿದಂತೆ ಹಲವು ಬಗೆಯ ಮನರಂಜನೆಯ ಥೀಮ್ ಗಳನ್ನು ಒಳಗೊಂಡಿರುವಂತೆ ಪಾರ್ಕ್ ನಿರ್ಮಿಸುವ ಉದ್ದೇಶವಿದೆ ಎಂದರು.
ರಾಮನಗರ ಜಿಲ್ಲೆಯ ಗ್ರಾಮೀಣ ಪ್ರದೇಶ ಗಳಲ್ಲಿರುವ ಎಲ್ಲ ಜನ ವಸತಿಗಳಿಗೆ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ 250 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿ ಜಿಲ್ಲಾದ್ಯಂತ ಕೈಗೆತ್ತಿಕೊಳ್ಳ ಲಾಗಿದೆ ಎಂದು ತಿಳಿಸಿದರು.
29 ಹಳ್ಳಿಗಳಿಗೆ ಕುಡಿವ ನೀರು: 210 ಕೋಟಿ ರೂ. ವೆಚ್ಚದಲ್ಲಿ ಕೋಡಿಹಳ್ಳಿ ಹಾಗೂ ಇತರೆ 299 ಹಳ್ಳಿಗಳಿಗೆ ಬಹುಗ್ರಾಮ ಕುಡಿ ಯುವ ನೀರಿನ ಸರಬರಾಜು ಯೋಜನೆ, 4 ಕೋಟಿ ರೂ. ವೆಚ್ಚದಲ್ಲಿ ಸಾತನೂರು, 29 ಹಳ್ಳಿಗಳಿಗೆ ಕುಡಿಯುವ ನೀರಿನ ಸರ ಬರಾಜು ಯೋಜನೆ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
110 ಕೋಟಿ ರೂ. ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ, 70 ಕೋಟಿ ರೂ. ವೆಚ್ಚದಲ್ಲಿ ದೊಡ್ಡಾಲಹಳ್ಳಿ ಮೈಕ್ರೋ ಇರಿಗೇಷನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ರಾಮನಗರ ಜಿಪಂ ಸಿಇಒ ಇಕ್ರಂ, ಎಸ್ಪಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.