ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ| ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ| ಮಲ್ಲಿಕಾರ್ಜುನ ಮನಸೂರ 111ನೇ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ನಗರದ ಸೃಜನಾ ರಂಗಮಂದಿರದಲ್ಲಿ ಶನಿವಾರ ಜರುಗಿತು.
ಹಿಂದೂಸ್ತಾನಿ ಸಂಗೀತಗಾರರಾದ ಮುಂಬೈನ ಪಂ| ನಿತ್ಯಾನಂದ ಹಳದಿಪುರ ಅವರಿಗೆ 1 ಲಕ್ಷ ನಗದು ಒಳಗೊಂಡ ರಾಷ್ಟ್ರೀಯ ಪ್ರಶಸ್ತಿ ಹಾಗೂ 25 ಸಾವಿರ ನಗದು ಒಳಗೊಂಡ ಯುವ ಪ್ರಶಸ್ತಿಯನ್ನು ಧಾರವಾಡದ ಯುವ ಗಾಯಕಿ ಶಿವಾನಿ ಮಿರಜಕರ ಅವರಿಗೆ ಟ್ರಸ್ಟ್ ಅಧ್ಯಕ್ಷ ಡಿಸಿ ನಿತೇಶ ಪಾಟೀಲ ಅವರು ಪ್ರದಾನ ಮಾಡಿದರು. ಅತಿಥಿಯಾಗಿದ್ದ ಪದ್ಮಶ್ರೀ ಪುರಸ್ಕೃತ ಪಂ| ಎಂ.ವೆಂಕಟೇಶಕುಮಾರ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಡಾ| ಮನಸೂರರ ಕೊಡುಗೆ ಅಪಾರ. ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.
ಈ ಪರಂಪರೆ ನಿರಂತರ ಸಾಗುವುದರ ಜತೆಗೆ ಯುವ ಪೀಳಿಗೆಗೆ ಮನಸೂರರನ್ನು ಪರಿಚಯಿಸುವ ಅಗತ್ಯವಿದೆ ಎಂದರು. ದೇಶ-ವಿದೇಶದಲ್ಲಿಯೇ ಧಾರವಾಡಕ್ಕೆ ವಿಶಿಷ್ಟ ಸ್ಥಾನವಿದ್ದು, ಸಾಹಿತ್ಯ, ಸಂಗೀತ ಹಾಗೂ ಲಲಿತಕಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವಷ್ಟು ಟ್ರಸ್ಟ್ ಯಾವ ಜಿಲ್ಲೆಯಲ್ಲೂ ಇಲ್ಲ. ಇದು ಈ ಕ್ಷೇತ್ರಗಳಲ್ಲಿ ಇಲ್ಲಿಯವರ ಸಾಧನೆಗೆ ಹಿಡಿದ ಕೈಗನ್ನಡಿ. ಕಲಾವಿದರು ಎಂದಿಗೂ ಪ್ರಶಸ್ತಿ ಬಯಸುವುದಿಲ್ಲ. ಅವರ ಸಾಧನೆ ಗುರುತಿಸಿ ಪ್ರಶಸ್ತಿ ಅರಸಿಕೊಂಡು ಬರುತ್ತದೆ ಎಂದು ಹೇಳಿದರು.
ಯುವ ಗಾಯಕಿ ಶಿವಾನಿ ಮಿರಜಕರ ಮಾತನಾಡಿ, ನನ್ನ ಸಂಗೀತ ಜೀವನ ಡಾ| ಮನಸೂರರ ಪ್ರಶಸ್ತಿಯಿಂದ ಆರಂಭಗೊಂಡಿದ್ದು ಸಂತಸ ತಂದಿದೆ. ಈ ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದೆ ಎಂದರು. ಬಾಬುರಾವ್ ಹಾನಗಲ್, ನೀಲಾ ಕೊಡ್ಲಿ, ಎಸಿ ಗೋಪಾಲಕೃಷ್ಣ ಬಿ., ಮಂಜುಳಾ ಯಲಿಗಾರ ಇನ್ನಿತರರಿದ್ದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪಂ| ನಿತ್ಯಾನಂದ ಹಳದಿಪುರ ಅವರಿಂದ ಕೊಳಲು ವಾದನ ಹಾಗೂ ಶಿವಾನಿ ಮಿರಜಕರ ಗಾಯನ ನಡೆಯಿತು.