ಶಿರ್ವ: ಪ್ರತಿಯೊಂದು ಮಗುವಿನಲ್ಲಿಯೂ ಅಪ್ರತಿಮ ಪ್ರತಿಭೆ ಇದ್ದು, ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿಸುವ ಮೂಲಕ ಮಾನಸ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಮಾಜಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ. ಮಾನಸಿಕವಾಗಿ ಬೆಳವಣಿಗೆಯಾಗದ ವಿಶೇಷ ಚೇತನ ಮಕ್ಕಳಿಗೆ ಜಿಲ್ಲಾ ಕ್ರೀಡೋತ್ಸವ ಆಯೋಜಿಸಿ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಮೆರೆಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಹೇಳಿದರು.
ಅವರು ನ. 3 ರಂದು ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಜಂಟಿಯಾಗಿ ಆಯೋಜಿಸಿರುವ ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಕ್ರೀಡೋತ್ಸವವನ್ನು ಉದ್ಘಾಟಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶಾಲೆಯ ಕ್ರೀಡಾಪಟುಗಳಿಂದ ಪಥ ಸಂಚಲನ ನಡೆದು ಉಡುಪಿ ಜಿಲ್ಲಾಧಿಕಾರಿ ಧ್ವಜವಂದನೆಯನ್ನು ಸ್ವೀಕರಿಸಿದರು.
ನಿವೃತ್ತ ಹಿರಿಯ ನೌಕಾಧಿಕಾರಿ ಕೊಮೊಡೋರ್ ಜೆರೋಂ ಕ್ಯಾಸ್ತಲಿನೋ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ ಸರಕಾರ ವಿಶೇಷ ಮಕ್ಕಳ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನಡೆಸಿ ಸಮಾಜದಲ್ಲಿ ಸದೃಢ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ ಮೈದಾನದಲ್ಲಿ ಬಲೂನು ಹಾರಿಸುವುದರ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ,ವಿಶೇಷ ಚೇತನ ಶಿಕ್ಷಕ ಮತ್ತು ಶಿಕ್ಷಕೇತರ ಸಂಘದ ರಾಜ್ಯಅಧ್ಯಕ್ಷೆ ಡಾ| ಕಾಂತಿ ಹರೀಶ್, ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾ ಅಧ್ಯಕ್ಷ ರವೀಂದ್ರ .ಹೆಚ್,ಮಾನಸ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿಗಾರ್, ಮಾನಸ ಸಂಸ್ಥೆಯ ಮಾಜಿ ಅಧ್ಯಕ್ಷೆ ರೆಮೆಡಿಯಾ ಡಿಸೋಜಾ, ಕಾರ್ಯದರ್ಶಿ ಜೋಸೆಫ್ ನೊರೊನ್ಹಾ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು,ಕೆಥೋಲಿಕ್ ಸಭೆಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮೆನೇಜಸ್ ಸ್ವಾಗತಿಸಿದರು. ಶಿಕ್ಷಕಿಯರಾದ ಪ್ರಮೀಳಾ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್ ವಂದಿಸಿದರು.
ಜಿಲ್ಲೆಯ 12 ವಿಶೇಷ ಚೇತನ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಪಥಸಂಚಲನದಲ್ಲಿ ಪ್ರಥಮ ಬಹುಮಾನ ಪಡೆದ ಮಾನಸ ಸಂಸ್ಥೆ, ದ್ವಿತೀಯ ಬಹುಮಾನ ಪಡೆದ ವಿಜೇತಾ ಕಾರ್ಕಳ ಮತ್ತು ತೃತೀಯ ಬಹುಮಾನ ಪಡೆದ ಉಡುಪಿ ಆಶಾ ನಿಲಯದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಬಹುಮಾನ ವಿತರಿಸಿದರು.