ಮಂಗಳೂರು: ಮನಪಾ ಕಾಂಗ್ರೆಸ್ ಆಡಳಿತದ ಐದು ವರ್ಷ ಅವಧಿಯ ಐದನೇ ತಥಾ ಕೊನೆಯ ಅವಧಿಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಸೋಮವಾರ ಪ್ರಕಟಿಸಿದೆ. ಈ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಇದರೊಂದಿಗೆ ಸ್ಥಾನಾಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರ ಶುರುವಾಗಲಿದೆ.
ಹಾಲಿ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಅವರ ಅಧಿಕಾರ ಅವಧಿ 2018ರ ಮಾರ್ಚ್ 9ಕ್ಕೆ ಕೊನೆಗೊಳ್ಳಲಿದೆ. ಮಾ.10ರೊಳಗೆ ಚುನಾವಣೆ ನಡೆದು, ಹೊಸ ಮೇಯರ್-ಉಪಮೇಯರ್ ಆಯ್ಕೆ ಆಗಬೇಕು. ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ 35 ಸ್ಥಾನ ಗಳಿಸಿರುವ ಕಾಂಗ್ರೆಸ್ ಬಹುಮತ ಹೊಂದಿದೆ. ಮೀಸಲಾತಿ ಸಾಮಾನ್ಯ ವರ್ಗಕ್ಕೆ ಬಂದಿರುವುದರಿಂದ 35 ಸದಸ್ಯರೂ ಮೇಯರ್, ಉಪಮೇಯರ್ ಸ್ಥಾನಕ್ಕೆ ಅರ್ಹರು. ಪಾಲಿಕೆಯಲ್ಲಿ ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿವೆ.
ಕಾಂಗ್ರೆಸ್ ಆಡಳಿತದ ಪ್ರಥಮ ವರ್ಷ ಮೇಯರ್‌ಗಾದಿ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡನೇ ವರ್ಷ ಮಹಿಳಾ ಸಾಮಾನ್ಯ ವರ್ಗಕ್ಕೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿಯಾಯಿತು. ಮೂರನೇ ವರ್ಷ ಈ ಅವಕಾಶ ಸಾಮಾನ್ಯ ವರ್ಗ ಹಾಗೂ ಪ.ಪಂಗಡ ಮಹಿಳಾ ವರ್ಗಕ್ಕೆ ಸಿಕ್ಕಿತು. ಕಾಂಗ್ರೆಸ್‌ನಲ್ಲಿ ಈ ವರ್ಗದ ಸದಸ್ಯರಿರದ ಕಾರಣ ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿತ್ತು. ಪ್ರಸ್ತುತ ಅವಧಿಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ರಾಜಕೀಯ ಆಟಕ್ಕೆ ವೇದಿಕೆ
ಮುಂದಿನ ಮೇಯರ್, ಉಪ ಮೇಯರ್ ಆಯ್ಕೆಗೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಮೀಸಲಾತಿ ಪ್ರಕಟಗೊಂಡಿರುವುದು ಸಾಕಷ್ಟು ರಾಜಕೀಯ ಆಟಕ್ಕೆ ವೇದಿಕೆ ನಿರ್ಮಿಸಿದೆ. ಒಂದೆಡೆ ವಿಧಾನಸಭೆ ಚುನಾವಣೆ, ಇನ್ನೊಂದೆಡೆ ಪ್ರಸ್ತುತ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಇದು ಕೊನೆಯ ಅವಕಾಶ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಲಾಭ-ನಷ್ಟದ ಲೆಕ್ಕಾಚಾರ ಇರಿಸಿಕೊಂಡೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಕಾಂಗ್ರೆಸ್ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಜಾತಿ ಲೆಕ್ಕಾಚಾರದ ಮೂಲಕ ಮೇಯರ್ ಸ್ಥಾನವನ್ನು ಕ್ರಮವಾಗಿ ಬಂಟ, ಕ್ರೈಸ್ತ, ಜೋಗಿ, ಬಿಲ್ಲವ ಸಮುದಾಯಗಳಿಗೆ ಒದಗಿಸಿದೆ. ಕೊನೆಯ ಅವಧಿಗೂ ಜಾತಿ ಲೆಕ್ಕಾಚಾರದಲ್ಲೇ ಮೇಯರ್ ಸ್ಥಾನ ಆಕಾಂಕ್ಷಿಗಳ ಪಾಲಾಗುವ ಸಾಧ್ಯತೆ ಹೆಚ್ಚು. ಮುಂದಿನ ಅವಧಿಗೆ ಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚು.