Advertisement

ಬೆಂಗಳೂರು ಸೇರಿ ಐದು ರೈಲು ನಿಲ್ದಾಣಗಳ ನಿರ್ವಹಣೆ ಖಾಸಗಿಗೆ

07:00 AM Apr 01, 2018 | Team Udayavani |

ಹೊಸದಿಲ್ಲಿ: ರೈಲ್ವೆ ಇಲಾಖೆಯ “ಏಕೀಕೃತ ನಿಲ್ದಾಣಗಳ ನಿರ್ವಹಣಾ ವ್ಯವಸ್ಥೆ’ ಯೋಜನೆಯಡಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಪುಣೆ, ಸಿಕಂದ್ರಾಬಾದ್‌, ಆನಂದ್‌ ವಿಹಾರ್‌ (ಹೊಸದಿಲ್ಲಿ) ಹಾಗೂ ಚಂಡೀಗಡದ ರೈಲು ನಿಲ್ದಾಣಗಳ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಮುಂದಿನ 15 ವರ್ಷಗಳವರೆಗೆ ಖಾಸಗಿಗೆ ವಹಿಸಲು ನಿರ್ಧರಿಸಲಾಗಿದೆ. 

Advertisement

ಬಜೆಟ್‌ ಮಂಡನೆ ವೇಳೆ, ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಪ್ರಸಕ್ತ ವರ್ಷ 600 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ನಿಲ್ದಾಣಗಳ ಖಾಸಗೀಕರಣಕ್ಕೆ ಮುಂದಡಿಯಿಡಲಾಗಿದೆ. ಈಗಾಗಲೇ ಭೋಪಾಲ್‌ನ ಹಬೀಬ್‌ಗಂಜ್‌ ನಿಲ್ದಾಣ ಖಾಸಗಿಗೆ ಹಸ್ತಾಂತರಗೊಂಡಿದ್ದು, ಈಗ ಮತ್ತೆ 5 ನಿಲ್ದಾಣಗಳು ಸೇರಿದರೆ, ದೇಶದಲ್ಲಿ ಖಾಸಗಿ ಪಾಲಾದ ರೈಲು ನಿಲ್ದಾಣಗಳ ಸಂಖ್ಯೆ 6ಕ್ಕೇರುತ್ತದೆ. 

ಅನುಷ್ಠಾನ ಹೇಗೆ?: ಯೋಜನೆಯ ಮೊದಲ ಹೆಜ್ಜೆಯಾಗಿ, ಈ 5 ನಿಲ್ದಾಣಗಳನ್ನು ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ (ಐಆರ್‌ಎಸ್‌ಡಿಸಿ) ಸುಪರ್ದಿಗೆ ವಹಿಸಲಾಗುತ್ತದೆ. ಆನಂತರ, ಐಆರ್‌ಎಸ್‌ಡಿಸಿ ಈ ನಿಲ್ದಾಣಗಳ ನಿರ್ವಹಣೆ ಕುರಿತು ಟೆಂಡರ್‌ ಕರೆಯಲಿದೆ. ಟೆಂಡರ್‌ ಗೆಲ್ಲುವ ಖಾಸಗಿ ಸಂಸ್ಥೆಗಳಿಗೆ ನಿಲ್ದಾಣಗಳು ಹಸ್ತಾಂತರಗೊಳ್ಳಲಿವೆ. ಈ ನಿಲ್ದಾಣಗಳಲ್ಲಿ ಕ್ರೋಢೀಕರಣಗೊಳ್ಳುವ ಆರ್ಥಿಕ ಸಂಪನ್ಮೂಲ ಯಾವ ರೀತಿ ಖಾಸಗಿ ಹಾಗೂ ಇಲಾಖೆ ನಡುವೆ ಹಂಚಿಕೆಯಾಗಬೇಕು ಎಂಬುದಿನ್ನೂ ನಿರ್ಧಾರಗೊಂಡಿಲ್ಲ. 

ಖಾಸಗಿಗೇನು ಜವಾಬ್ದಾರಿ?
ನಿಲ್ದಾಣಗಳ ಮೇಲುಸ್ತುವಾರಿ ಜವಾಬ್ದಾರಿ ಹೊರುವ ಖಾಸಗಿ ಸಂಸ್ಥೆಯು, ನಿಲ್ದಾಣಗಳ ನೈರ್ಮಲ್ಯ, ಶುಚಿತ್ವ, ಉತ್ತಮ ಶೌಚಾಲಯ ವ್ಯವಸ್ಥೆ, ಪ್ಲಾಟ್‌ ಫಾರಂ ಟಿಕೆಟ್‌ ಮಾರಾಟ, ನಿಲ್ದಾಣದ ಅಂಗಡಿಗಳು, ಉಪಾಹಾರ ಗೃಹಗಳು, ರೈಲ್ವೆ ಡಿಸ್‌ಪ್ಲೇ ಬೋರ್ಡ್‌ಗಳು, ನಿಲ್ದಾಣ ಹಾಗೂ ಸಂಬಂಧಪಟ್ಟ ಸ್ಥಳಗಳಲ್ಲಿ ಜಾಹೀರಾತುಗಳ ನಿರ್ವಹಣೆ, ವಾಹನಗಳ ಪಾರ್ಕಿಂಗ್‌ ಸೇವೆಗಳನ್ನು ನಿರ್ವಹಿಸಲಿದೆ. ಆದರೆ, ಪ್ರಮುಖವಾದ ಸಿಗ್ನಲಿಂಗ್‌ ಹಾಗೂ ರೈಲುಗಳ ಸಂಚಾರ ನಿರ್ವಹಣೆಗಳನ್ನು ರೈಲ್ವೆ ಇಲಾಖೆಯೇ ನೋಡಿಕೊಳ್ಳುತ್ತದೆ. 

ಎಲ್ಲಾ ನಿಲ್ದಾಣಗಳಿಗೆ ಎಲ್‌ಇಡಿ ಬಲ್ಬ್  ಅಳವಡಿಕೆ
ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವ ಕಾಮಗಾರಿ ಸಂಪೂರ್ಣಗೊಂಡಿದ್ದು, ಇದರಿಂದ ಇಲಾಖೆ ಭರಿಸುವ ವಾರ್ಷಿಕ ವಿದ್ಯುತ್‌ ಬಿಲ್‌ನಲ್ಲಿ 50 ಕೋಟಿ ರೂ.ಗಳಷ್ಟು ಉಳಿತಾಯವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. “2019ರ ಮಾ. 31ರೊಳಗೆ ಶೇ.100ರಷ್ಟು ಎಲ್‌ಇಡಿ ಬಲ್ಬ್ ಅಳವಡಿಸುವ ಗುರಿ ಇತ್ತು. ಆದರೆ, 2018ರ ಮಾರ್ಚ್‌ 30ರೊಳಗೇ ಈ ಗುರಿಯನ್ನು ಸಾಧಿಸಲಾಗಿದೆ’ ಎಂದು ಇಲಾಖೆ ಹೇಳಿದೆ. 

Advertisement

ಪುಣೆ, ಸಿಕಂದ್ರಾಬಾದ್‌, ಆನಂದ್‌ ವಿಹಾರ್‌, ಚಂಡೀಗಡ ನಿಲ್ದಾಣಗಳು ಪಟ್ಟಿಯಲ್ಲಿ
ಆರಂಭಿಕ ಹೆಜ್ಜೆಯಾಗಿ ನಿಲ್ದಾಣಗಳು ಐಆರ್‌ಎಸ್‌ಡಿಸಿಗೆ ಹಸ್ತಾಂತರ 
ಐಆರ್‌ಎಸ್‌ಡಿಸಿ ಟೆಂಡರ್‌ ಪಡೆಯುವ ಕಂಪನಿಗಳಿಗೆ ನಿಲ್ದಾಣಗಳ ಹಸ್ತಾಂತರ
ನಿಲ್ದಾಣಗಳ ನಿರ್ವಹಣೆ, ಜಾಹೀರಾತು, ಫ್ಲಾಟ್‌ ಫಾರಂ ಟಿಕೆಟ್‌ ಮಾರಾಟ ಖಾಸಗಿಗೆ
ಸಿಗ್ನಲಿಂಗ್‌, ರೈಲು ಸಂಚಾರ ನಿಯಂತ್ರಣ ವ್ಯವಸ್ಥೆ ಎಂದಿನಂತೆ ರೈಲ್ವೆ ಸುಪರ್ದಿಯಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next