Advertisement

ಅಂಕಪಟ್ಟಿ ವಿಳಂಬ: ಉನ್ನತ ಶಿಕ್ಷಣ-ಉದ್ಯೋಗಕ್ಕೆ ಕುತ್ತು;ಅಂಕಪಟ್ಟಿಗಾಗಿ ವಿದ್ಯಾರ್ಥಿಗಳ ಗೋಳಾಟ

08:03 AM Oct 21, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಪರೀಕ್ಷೆ ನಡೆದು ಫಲಿತಾಂಶ ಘೋಷಣೆಯಾಗಿದ್ದರೂ ಅಂಕಪಟ್ಟಿ ವಿಳಂಬದಿಂದಾಗಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ-ಉದ್ಯೋಗಕ್ಕೆ ಕುತ್ತು ಬಂದಿದೆ.

Advertisement

ಒಂದು ಸೆಮಿಸ್ಟರ್‌ನ ಪರೀಕ್ಷೆ ನಡೆದು ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಿ ಅಂಕಪಟ್ಟಿ ತಲುಪಿಸುವ ಪ್ರಕ್ರಿಯೆ ಮುಗಿಸಲು ಕೆಲವು ತಿಂಗಳು ಬೇಕಾಗುತ್ತದೆ. ಇದರಿಂದಾಗಿ ಬೇರೆ ಬೇರೆ ವಿ.ವಿ.ಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅಥವಾ ಉದ್ಯೋಗಕ್ಕೆ ಅರ್ಜಿ ಹಾಕುವವರಿಗೆ ಅವಕಾಶ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ವಿದೇಶಕ್ಕೆ ಉದ್ಯೋಗ/ವಿದ್ಯಾಭ್ಯಾಸಕ್ಕೆ ತೆರಳುವವರ ಅವಕಾಶಕ್ಕೆ ಬಾಗಿಲು ಮುಚ್ಚಿದ ಪರಿಸ್ಥಿತಿ.

ಮೊದಲ 4 ಸೆಮಿಸ್ಟರ್‌ಗಳ ಅಂಕಪಟ್ಟಿ ಬಂದಿದೆ. ಆದರೆ 5ನೇ ಸೆಮಿಸ್ಟರ್‌ ಫಲಿತಾಂಶ ಬಂದು 6 ತಿಂಗಳಾದರೂ ಅಂಕಪಟ್ಟಿ ಬಂದಿಲ್ಲ. 6ನೇ ಸೆಮಿಸ್ಟರ್‌ನ ಫಲಿತಾಂಶವೇ ಇನ್ನು ಬರಬೇಕು. ಬಳಿಕ ಅಂಕಪಟ್ಟಿ ಕೈಸೇರಲು ಇನ್ನೆಷ್ಟು ತಿಂಗಳು ಕಾಯಬೇಕೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.

ವಿದ್ಯಾರ್ಥಿವೇತನಕ್ಕೂ ಕತ್ತರಿ! : 

ಅಂಕಪಟ್ಟಿ ತಡವಾಗುವ ಪರಿಣಾಮ ಉದ್ಯೋಗ ಮಾತ್ರವಲ್ಲದೆ ಸರಕಾರದ ಇತರ ಸೇವೆಗಳಿಂದ ವಿದ್ಯಾರ್ಥಿಗಳು ವಂಚಿತರಾಗುವ ಅಪಾಯವಿರುತ್ತದೆ. ಸಮಯಕ್ಕೆ ಸರಿಯಾಗಿ ಅಂಕಪಟ್ಟಿ ಸಿಗದೆ ವಿದ್ಯಾರ್ಥಿವೇತನಕ್ಕೆ ನಿಗದಿತ ಸಮಯದಲ್ಲಿ ಅರ್ಜಿ ಹಾಕಲು ಹಲವು ವಿದ್ಯಾರ್ಥಿಗಳಿಗೆ ಆಗುವುದಿಲ್ಲ. ಹಾಸ್ಟೆಲ್‌ಗ‌ಳಿಗೆ ಸೇರಲೂ ಸಾಧ್ಯವಾಗುತ್ತಿಲ್ಲ. ಬಸ್‌ಪಾಸ್‌ ಕೂಡ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ನೋವು.

Advertisement

5ನೇ ಸೆಮಿಸ್ಟರ್‌ನ ಅಂಕಪಟ್ಟಿಯಾದರೂ ಕೈಸೇರಿದ್ದರೆ ಅದರ ಆಧಾರದಲ್ಲಾದರೂ ಮುಂದಿನ ಶಿಕ್ಷಣಕ್ಕೋ, ಉದ್ಯೋಗಕ್ಕೋ ಪ್ರಯತ್ನಿಸ ಬಹುದು. ಹೀಗಾದರೆ ಮಕ್ಕಳ ಭವಿಷ್ಯ ಹೇಗೆ ಎಂಬ ಚಿಂತೆ ನಮಗೆ ಕಾಡುತ್ತಿದೆ ಎನ್ನುತ್ತಾರೆ ಪೋಷಕರಾದ ತಾರಾನಾಥ ಕಾರ್ಕಳ.

ಎಬಿವಿಪಿ ಮುಖಂಡ ಮಣಿಕಂಠ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ವಿ.ವಿ. ಶೈಕ್ಷಣಿಕ ವೇಳಾಪಟ್ಟಿಯೇ ಸರಿಯಾಗಿಲ್ಲ. ಪರೀಕ್ಷೆ ಮುಗಿದು ಮೌಲ್ಯಮಾಪನ ಮಾಡಿ ಫಲಿತಾಂಶ ಬೇಗ ನೀಡುತ್ತಿಲ್ಲ. ಹೀಗಾಗಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬೇರೆ ವಿ.ವಿ.ಯಲ್ಲಿ ಸೀಟ್‌ ಸಿಗುತ್ತಿಲ್ಲ. ಹೇಳಿಕೆ ನೀಡಲಾಗುತ್ತದೆಯೇ ವಿನಾ ಕಾರ್ಯರೂಪಕ್ಕೆ ಬರದೆ ವಿದ್ಯಾರ್ಥಿಗಳು ಈಗ ಅಂಕಪಟ್ಟಿಗಾಗಿ ಕಾಯುವ ಪ್ರಮೇಯ ಎದುರಾಗಿದೆ’ ಎನ್ನುತ್ತಾರೆ.

ವರ್ಷಾಂತ್ಯಕ್ಕೆ 6ನೇ  ಸೆಮಿಸ್ಟರ್‌ ಅಂಕಪಟ್ಟಿ? :

6ನೇ ಸೆಮಿಸ್ಟರ್‌ ಪರೀಕ್ಷೆ ಆಗಿ ಇತ್ತೀಚೆಗೆ ಮೌಲ್ಯಮಾಪನ ಮುಗಿದಿದೆ. ಇದರ ಫಲಿತಾಂಶವನ್ನು ಅಕ್ಟೋಬರ್‌ ಕೊನೆಯಲ್ಲಿ ನೀಡಲು ವಿ.ವಿ. ಚಿಂತನೆ ನಡೆಸಿದೆಯಾದರೂ, “ಕಷ್ಟ ಸಾಧ್ಯ’ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ. ಇದಾಗಿ ಅಂಕಪಟ್ಟಿ ಸಿಗಬೇಕಾದರೆ ಕೆಲವು ಸಮಯ ಬೇಕಾಗಬಹುದು. ಫಲಿತಾಂಶ ನೀಡಿದ ಅನಂತರ ಡಿಸೈನ್‌ ಮಾಡಿದ ಅಂಕಪಟ್ಟಿ ಸಿದ್ಧಪಡಿಸಬೇಕಾಗುತ್ತದೆ. ಇದಕ್ಕೆ ಸುಮಾರು 1 ತಿಂಗಳು ಬೇಕಾಗಬಹುದು. ಹೀಗಾಗಿ ಅಂಕಪಟ್ಟಿಗಾಗಿ ಈ ವರ್ಷಾಂತ್ಯದವರೆಗೆ ಕಾಯಲೇಬೇಕಾಗುತ್ತದೆ.

6ನೇ ಸೆಮಿಸ್ಟರ್‌ ಪರೀಕ್ಷೆ, ಮೌಲ್ಯಮಾಪನವನ್ನು ತುರ್ತಾಗಿ ನಡೆಸುವಂತೆ ಸರಕಾರದ ಸೂಚನೆ ಪ್ರಕಾರ ಅದರ ಫಲಿತಾಂಶವನ್ನು ಈ ಮಾಸಾಂತ್ಯಕ್ಕೆ ನೀಡುವ ಸಂಬಂಧ ತರಾತುರಿಯಲ್ಲಿದ್ದೇವೆ. ಮೂರು ಹಾಗೂ ಐದನೇ ಸೆಮಿಸ್ಟರ್‌ ಪರೀಕ್ಷೆ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ಆದ್ಯತೆ ಮೇರೆಗೆ ಐದನೇ ಸೆಮಿಸ್ಟರ್‌ ಫಲಿತಾಂಶ ನೀಡಲಾಗುವುದು.– ಪ್ರೊ| ಪಿ.ಎಲ್‌. ಧರ್ಮ,(ಪರೀಕ್ಷಾಂಗ) ಕುಲಸಚಿವರು,  ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next