ಚಿತ್ತೂರ್ (ಆಂಧ್ರ ಪ್ರದೇಶ): ಚೀನಾದ ವುಹಾನ್ ಪಟ್ಟಣದಲ್ಲಿ ಆರಂಭವಾದ ಕೊರೊನಾ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಚೀನಾದಲ್ಲಿ ಇದುವರೆಗೆ ಸಾವಿರಕ್ಕೂ ಹೆಚ್ಚಿನ ಜನರು ವೈರಸ್ ಗೆ ಬಲಿಯಾಗಿದ್ದಾರೆ. ಆದರೆ ನಮ್ಮ ನೆರೆ ರಾಜ್ಯ ಆಂಧ್ರ ಪ್ರದೇಶದ ವ್ಯಕ್ತಿಯೋರ್ವ ತನಗೆ ಕೊರೊನಾ ವೈರಸ್ ಇದೆಯೆಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆಂಧ್ರದ ಚಿತ್ತೂರಿನ ವ್ಯಕ್ತಿಯೋರ್ವ ಸೋಮವಾರ ತನಗಿರುವ ಕೊರೊನಾ ವೈರಸ್ ನಿಂದ ಊರನ್ನು ರಕ್ಷಿಸಬೇಕು ಎಂದು ತಿಳಿದು ತಾನೇ ಪ್ರಾಣತ್ಯಾಗ ಮಾಡಿದ್ದಾನೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿ ವೈದ್ಯರ ಬಳಿ ತೆರಳಿದ್ದ. ಆತನಿಗೆ ವೈದ್ಯರು ಯಾವುದೇ ಸೋಂಕಿನಿಂದ ಪಾರಾಗಲು ಮಾಸ್ಕ್ ಧರಿಸುವಂತೆ ಸೂಚಿಸಿದ್ದರು. ಆದರೆ ತನಗೆ ಕೊರೊನಾ ವೈರಸ್ ಇದೆಯೆಂದು ತಪ್ಪಾಗಿ ತಿಳಿದಿದ್ದ.
ತನಗೆ ಕೊರೊನಾ ವೈರಸ್ ಇದೇ ಹಾಗಾಗಿ ಯಾರೂ ತನ್ನ ಬಳಿ ಬರಬಾರದು ಎಂದು ಊರಿನವರಿಗೆ ಆತ ಹೇಳಿದ್ದ ಎನ್ನಲಾಗಿದೆ. ನಂತರ ತನ್ನಿಂದಾಗಿ ಊರಿಗೆ ವೈರಸ್ ತಗುಲಬಾರದು, ಊರನ್ನು ಕಾಪಾಡಬೇಕು ಎಂದು ತಿಳಿದು ತಾನೇ ಪ್ರಾಣ ತ್ಯಾಗ ಮಾಡಿದ್ದಾನೆ ಎನ್ನಲಾಗಿದೆ.
ಆದರೆ ಆ ವ್ಯಕ್ತಿಗೆ ಕೊರೊನಾ ವೈರಸ್ ಇರಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ಧಾರೆ.