Advertisement

ವಿಚ್ಛೇದನ ಬೇಕು ಎಂದು ಈ ಪತಿರಾಯ ಕೊಟ್ಟ ಕಾರಣ ಹೇಗಿದೆ ಗೊತ್ತಾ?

04:50 PM Mar 02, 2018 | Sharanya Alva |

ಮುಂಬೈ: ಮತ್ತೊಬ್ಬ ಅಥವಾ ಮತ್ತೊಬ್ಬಳ ಕೈ ಹಿಡಿಯಲು..ಹೀಗೆ ಕೆಲವು ಗಂಭೀರ ಕಾರಣಗಳ ಹಿನ್ನೆಲೆಯಲ್ಲಿ ವಿಚ್ಛೇದನ ಕೇಳುವ ಬಗ್ಗೆ ತಿಳಿದಿದೆ. ಆದರೆ ಮುಂಬೈ ನಿವಾಸಿಯೊಬ್ಬ ಕ್ಷುಲ್ಲಕ ಕಾರಣ ನೀಡಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

Advertisement

ವಿಚ್ಛೇದನಕ್ಕೆ ಗಂಡ ಕೊಟ್ಟಿರುವ ಕಾರಣ ಏನು ಗೊತ್ತಾ?

ತನ್ನ ಹೆಂಡತಿ ಬೆಳಗ್ಗೆ ತಡವಾಗಿ ಏಳುತ್ತಾಳೆ, ಆಕೆ ರುಚಿ, ರುಚಿಯಾದ ಅಡುಗೆ ಮಾಡುತ್ತಿಲ್ಲ ಹೀಗಾಗಿ ತನಗೆ ವಿಚ್ಛೇದನ ಬೇಕು ಎಂದು ಆರೋಪಿಸಿ ಪತಿ ಮಹಾಶಯ ಕೋರ್ಟ್ ಮೆಟ್ಟಿಲೇರಿದ್ದ.

ಬಾಂಬೆ ಹೈಕೋರ್ಟ್ ನ ಜಸ್ಟೀಸ್ ಕೆಕೆ ಟಾಟೆಡ್ ಹಾಗೂ ನ್ಯಾ.ಸಾರಂಗ್ ಕೊತ್ವಾಲ್ ನೇತೃತ್ವದ ದ್ವಿಸದಸ್ಯ ಪೀಠ, ಮುಂಬೈ ಸಾಂತಾಕ್ರೂಝ್ ನಿವಾಸಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶವನ್ನು ಎತ್ತಿಹಿಡಿದಿದೆ.

ನೀವು ನಿಮ್ಮ ಪತ್ನಿಯ ವಿರುದ್ಧ ಮಾಡಿರುವ ಆರೋಪಗಳ್ಯಾವುದೂ ಕ್ರೌರ್ಯತೆ ವ್ಯಾಪ್ತಿಯೊಳಗಿಲ್ಲ. ಅಲ್ಲದೇ ನೀವು ಕೊಟ್ಟ ಕಾರಣಗಳು ವಿಚ್ಛೇದನಕ್ಕೆ ಪೂರಕವಾಗಿಲ್ಲ ಎಂದು ಕೋರ್ಟ್ ಹೇಳಿದೆ.

Advertisement

ಪತ್ನಿ ರುಚಿ, ರುಚಿಯಾದ ಅಡುಗೆ ಮಾಡುವುದಿಲ್ಲ, ಆಕೆ ಬೇಗ ಎದ್ದೇಳುವುದಿಲ್ಲ ಎಂಬುದನ್ನು ಪರಿಗಣಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕಾರಣ ನೀಡಿ ವಿಚ್ಛೇದನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪತ್ನಿ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸತ್ಯ ಎಂದು ದೃಢೀಕರಿಸಲು ಪತಿರಾಯ ತನ್ನ ತಂದೆಯ ಲಿಖಿತ ಹೇಳಿಕೆಯನ್ನು ಸಾಕ್ಷ್ಯವನ್ನಾಗಿ ಕೋರ್ಟ್ ಗೆ ನೀಡಿದ್ದ. ಬೆಳಗ್ಗೆ ಬೇಗ ಎಬ್ಬಿಸಲು ಹೋದ ಸಂದರ್ಭದಲ್ಲಿ ತನ್ನ ಪತ್ನಿ ತನಗೂ, ತನ್ನ ಪೋಷಕರಿಗೆ ಬೈಯುವುದಾಗಿಯೂ ದೂರಿದ್ದ. ಸಂಜೆ 6ಗಂಟೆಗೆ ಮನೆಗೆ ಬಂದರೂ ಕೂಡಾ ಆಕೆ 8.30ಕ್ಕೆ ಅಡುಗೆ ಮಾಡುತ್ತಾಳೆ. ಆಕೆ ತನ್ನ ಜತೆ ಅಮೂಲ್ಯ ಸಮಯವನ್ನು ಕಳೆಯುತ್ತಿಲ್ಲ. ನಾನು ಕಚೇರಿಯಿಂದ ತಡವಾಗಿ ಮನೆಗೆ ಬಂದರೆ ಒಂದು ಗ್ಲಾಸ್ ನೀರು ಬೇಕಾ ಎಂದೂ ಕೂಡಾ ಕೇಳುವುದಿಲ್ಲ ಎಂದು ಅರ್ಜಿಯಲ್ಲಿ ಪತಿ ಅಳಲು ತೋಡಿಕೊಂಡಿದ್ದಾರೆ!

ವಿಚಾರಣೆ ವೇಳೆ ಪತಿರಾಯನ ಎಲ್ಲಾ ಆರೋಪವನ್ನೂ ಪತ್ನಿ ಅಲ್ಲಗಳೆದಿದ್ದಾಳೆ, ಕಚೇರಿ ಕೆಲಸಕ್ಕೆ ಹೋಗುವ ಮೊದಲೇ ಇಡೀ ಕುಟುಂಬದ ಸದಸ್ಯರಿಗೆ ಊಟ ತಯಾರಿಸಿ ಇಡುವುದಾಗಿ ತಿಳಿಸಿದ್ದು, ತಾನು ಮನೆಗೆಲಸದಲ್ಲಿ ಎಷ್ಟು ತೊಡಗಿಸಿಕೊಳ್ಳುತ್ತಿದ್ದೇನೆ ಎಂಬುದಕ್ಕೆ ಪತ್ನಿ ಕೂಡಾ ನೆರೆಹೊರೆಯವರ ಹಾಗೂ ಕೆಲವು ಸಂಬಂಧಿಗಳ ಸಾಕ್ಷ್ಯವನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next