ಮೇಲುಕೋಟೆ: ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಗುರುವಾರ ರಾತ್ರಿ ಭಕ್ತರ ಭಾವನೆಗಳಿಗೆ ಆಘಾತವಾಗುವ ಅತ್ಯಂತ ಕೆಟ್ಟ ಘಟನೆಯೊಂದು ನಡೆದು ಹೋಗಿದೆ. ಮೇಲುಕೋಟೆಯ ಯುವಕನೊಬ್ಬ ಶ್ರೀಸ್ವಾಮಿಯ ಗರ್ಭಗುಡಿಯ ಬಾಗಿಲ ಮಧ್ಯೆ ಜಯವಿಜಯರ ನಡುವೆ ಬೆತ್ತಲಾಗಿ ನಿಂತು ಹುಚ್ಚಾಟ ಮಾಡಿದ್ದಾನೆ.
ದೇವಾಲಯದ ಮುಂದೆ ಚುರುಮುರಿ ಮಾರಿ ಜೀವನ ನಿರ್ವಹಿಸುತ್ತಿದ್ದ ರಾಮ್ ಕುಮಾರ್ ಎಂಬಾತನೇ ಈ ಹುಚ್ಚಾಟನಡೆಸಿದ್ದು ಗಾಂಜಾಸೇವೆನೆಯೇ ಈತನ ಹುಚ್ಚಾಟಕ್ಕೆ ಕಾರಣ ಎಂಬ ಆರೋಪ ನಾಗರೀಕರು ಹಾಗೂ ದೇವಾಲಯದ ಸಿಬ್ಬಂದಿಯಿಂದ ಕೇಳಿ ಬಂದಿದೆ. ರಾಮ್ ಕುಮಾರ್ ಈಚೆಗೆ ಅಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದು, ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಮಾಡಿರುವುದಾಗಿ ಹೇಳಿಕೊಂಡು ಮನೆಯಲ್ಲೇ ಮಂಡ್ಯ ಜಿಲ್ಲಾ ಕಛೇರಿ ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದನು.
ಈತ ಇತ್ತೀಚೆಗೆ ಗಾಂಜಾ ದಾಸನಾಗಿ ಕಳೆದ ಒಂದು ವಾರದಿಂದ ರಾತ್ರಿ ವೇಳೆ ಹುಚ್ಚಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಗಾಗ್ಗೆ ಸಾರ್ವಜನಿಕರೂ ಸಹ ಈತನಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇವನ ಹುಚ್ಚಾಟ ವಿಪರೀತವಾಗಿ ಗುರುವಾರ ರಾತ್ರಿ ದೇವಾಲಯ ಮುಕ್ತಾಯವಾಗುತ್ತಿದ್ದ ರಾತ್ರಿ ೯ರ ಸುಮಾರಿನಲ್ಲಿ ಏಕಾಏಕಿ ದೇಗುಲದ ಶುಕನಾಸಿಗೆ ಪ್ರವೇಶ ಮಾಡಿ ನಾನು ಚೆಲುವನಾರಾಯಣಸ್ವಾಮಿಯ ತಮ್ಮ ಅವನ ಪಕ್ಕದಲ್ಲೇ ನಿಲ್ಲುತ್ತೇನೆ ಎಂದು ಹುಚ್ಚಾಟ ಮಾಡಿದ್ದಾನೆ.
ನಾನೇ ರಾಮ, ನಾನೇ ಅಲ್ಲ ಎಂದು ಆಕ್ರೋಶದಿಂದ ಕಿರಚಾಡಿ ಸಿಬ್ಬಂದಿಯನ್ನು ಬೆದರಿಸಿದ್ದಾನೆ. ದೇವಾಲಯದ ಸಿಬ್ಬಂದಿ ಆತನನ್ನು ಬಲವಂತವಾಗಿ ಹೊರ ಹಾಕಲು ಪ್ರಯತ್ನಿಸಿದಾಗ ಬಟ್ಟೆಬಿಚ್ಚಿ ಬೆತ್ತಲಾಗಿ ಹುಚ್ಚಾಟ ಹೆಚ್ಚು ಮಾಡಿದ್ದಾನೆ. ಈ ವೇಳೆ ಸಿಬ್ಬಂದಿ ದೇವಾಲಯದಿಂದ ರಾಮ್ ಕುಮಾರ್‌ನನ್ನು ಹೊರ ಹಾಕಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಮೇಲುಕೋಟೆ ಇನ್ಸ್ಪೆಕ್ಟರ್ ಸುಮಾರಾಣಿ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಪೊಲೀಸರ ಮುಂದೆ ಸಹ ಬಟ್ಟೆ ಹಾಕಿಕೊಳ್ಳದೆ ಮತ್ತೆ ದೇವಾಲಯಕ್ಕೆ ನುಗ್ಗಲು ಪ್ರಯತ್ನ ಮಾಡಿದ ರಾಮ್ ಕುಮಾರನನ್ನು ಬಲವಂತದಿAದ ಮನೆಗೆ ಕಳುಹಿಸಲಾಗಿದೆ. ಇಡೀ ಘಟನಾವಳಿ ಚಿತ್ರಣಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು ದೇವಾಲಯದ ಇಒ ಮಂಗಳಮ್ಮ ಮೇಲುಕೋಟೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕಾನೂನು ಕ್ರಮ ಜರುಗಿಸಲು ಮನವಿ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್.ಪಾರ್ಥಸಾರಥಿ, ಪವಿತ್ರ ಕ್ಷೇತ್ರವಾದ ಮೇಲುಕೋಟೆಯಲ್ಲಿ ಗಾಂಜಾ ವಾಸನೆಯ ವಿಚಾರ ಕೇಳಿ ಬರುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಮ್ ಕುಮಾರ್ ಸಹ ಗಾಂಜಾ ಸೇವಿಸಿದ್ದಾನೆ ಎಂಬ ಆರೋಪವಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕ್ಷೇತ್ರ ಹಾಗೂ ದೇವಾಲಯದ ಪಾವಿತ್ರತೆ ಕಾಪಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.