ಹರಿಯಾಣ: ‘ರಾಮಲೀಲಾ’ ನಾಟಕ ಪ್ರದರ್ಶನದ ವೇಳೆ ಹನುಮನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಹೃದಯಾಘಾತಗೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹರಿಯಾಣದ ಭೀಮನಿಯಲ್ಲಿ ಸೋಮವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರೀಶ್ ಮೆಹ್ತಾ ಮೃತ ದುರ್ದೈವಿಯಾಗಿದ್ದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹರಿಯಾಣದ ಭೀಮಾನಿಯಲ್ಲಿ ರಾಮಲೀಲಾ ನಾಟಕ ಪ್ರದರ್ಶನ ನಡೆಸಲಾಗುತ್ತಿತ್ತು ಈ ವೇಳೆ ದುರ್ಘಟನೆ ಸಂಭವಿಸಿದೆ.
ಭಿವಾನಿಯ ಜವಾಹರ್ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ “ರಾಜ್ ತಿಲಕ್” ಎಂಬ ಕಾರ್ಯಕ್ರಮದಲ್ಲಿ ಈ ಘಟನೆಯು ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಕ್ರಮವು ಹಾಡಿನ ಮೂಲಕ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ಒಳಗೊಂಡಿತ್ತು. ಹಾಡಿನ ಮುಕ್ತಾಯದ ಬಳಿಕ, ಹನುಮಾನ್ ಪಾತ್ರದಲ್ಲಿದ್ದ ಹರೀಶ್ ಮೆಹ್ತಾ ಅವರು ಭಗವಾನ್ ರಾಮನ ಪಾದಗಳನ್ನು ಮುಟ್ಟಿ ಪ್ರಾರ್ಥನೆ ಸಲ್ಲಿಸಬೇಕಿತ್ತು ಈ ಸಮಯದಲ್ಲೇ ಹೃದಯಾಘಾತಗೊಂಡು ಹನುಮಾನ್ ಪಾತ್ರದಾರಿ ಕುಸಿದು ಬಿದ್ದಿದ್ದಾರೆ ಆದರೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಇದು ನಾಟಕದ ಒಂದು ಭಾಗವಾಗಿರಬಹುದು ಎಂದುಕೊಂಡಿದ್ದರು ಆದರೆ ವೇದಿಕೆ ಮೇಲಿದ್ದ ಇತರ ಪಾತ್ರಧಾರಿಗಳು ಹನುಮಾನ್ ಪಾತ್ರಧಾರಿಯನ್ನು ಮೇಲಕ್ಕೆ ಎತ್ತುವಾಗಲೇ ಗೊತ್ತು ಇದು ನಾಟಕವಲ್ಲ ನಿಜ ಎಂಬುದು.
ಕೂಡಲೇ ಹರೀಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಹರೀಶ್ ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದು ನಿವೃತ್ತರಾಗಿದ್ದರು. ಕಳೆದ 25 ವರ್ಷಗಳಿಂದ ಹನುಮಂತನ ಪಾತ್ರವನ್ನು ನಿರ್ವಹಿಸಿ ಜನಮನ್ನಣೆಗಳಿಸಿದ್ದರು.