ಎಚ್.ಡಿ.ಕೋಟೆ: ರಾತ್ರಿ ಕಾವಲಿನಲ್ಲಿದ್ದ ಮೂವರು ಅರಣ್ಯ ವೀಕ್ಷಕರ ಮೇಲೆ ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಸೊಳ್ಳಾಪುರ ಬಳಿ ಶನಿವಾರ ತಡರಾತ್ರಿ ನಡೆದಿದೆ.
ತಾಲೂಕಿನ ಮೇಟಿಕುಪ್ಪೆ ನಿವಾಸಿ ಮಹದೇವಸ್ವಾಮಿ (36) ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ. ಮಹದೇವಸ್ವಾಮಿ ಜೊತೆಗಿದ್ದ ವೀಕ್ಷಕರಾದ ರಾಜೇಶ್‌ನಿಗೆ ಸಣ್ಣಪುಟ್ಟ ಗಾಯವಾಗಿದೆ. ಇನ್ನೊಬ್ಬ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾನೆ.
ಘಟನೆ ವಿವರ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಚ್.ಡಿ.ಕೋಟೆ ತಾಲೂಕು ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ರೈತರ ಬೆಳೆ ನಾಶಪಡಿಸುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆ ಹಂಗಾಮಿ ನೌಕರರ ಮೂಲಕ ಕಾವಲು ಕಾಯುವ ಕೆಲಸ ಮಾಡುತ್ತಿದೆ. 10 ವರ್ಷ ಹಿಂದೆ ಮೇಟಿಕುಪ್ಪೆ ಗ್ರಾಮದ ಮಹದೇವಸ್ವಾಮಿ ಅರಣ್ಯ ವೀಕ್ಷಕರಾಗಿ ನೇಮಕವಾಗಿದ್ದರು. ಶನಿವಾರ ರಾತ್ರಿ 6 ಮಂದಿ ವಾಚರ್‌ಗಳ ತಂಡದ ಪೈಕಿ 3 ಮಂದಿಯಂತೆ 2 ತಂಡ ರಚಿಸಿ ರಾತ್ರಿ ಆನೆ ಕಾವಲಿಗೆ ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಒಂದು ತಂಡದಲ್ಲಿದ್ದ 3 ಮಂದಿ ಶನಿವಾರ ತಡರಾತ್ರಿ ಕಾವಲಿನಲ್ಲಿದ್ದಾಗ ಅರಣ್ಯದಂಚಿನ ಸೊಳ್ಳಾಪುರ ಬಳಿಯಲ್ಲಿ ಕಾಡಾನೆಯೊಂದು ದಿಢೀರ್ ಎದುರಾಗಿದೆ. ಇಬ್ಬರು ಸಮಯ ಪ್ರಜ್ಞೆ ಮರೆದು ಸ್ಥಳದಿಂದ ಪರಾರಿಯಾದರೆ, ಮಹದೇವಸ್ವಾಮಿ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಟುಂಬದವರ ರೋದನ: ದಾಳಿ ನಡೆಸಿದ ಕಾಡಾನೆಯನ್ನು ಹಿಮ್ಮೆಟ್ಟಿಸಿ ಮಹದೇವಸ್ವಾಮಿಯನ್ನು ರಾತ್ರಿಯೇ ಎಚ್ .ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮೃತನಿಗೆ ಇಬ್ಬರು ಮಕ್ಕಳಿದ್ದು, ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಹೊಸ ವರ್ಷದ ಸಡಗರದಲ್ಲಿ ಬಹುಸಂಖ್ಯೆ ಮಂದಿ ತಲ್ಲೀನರಾಗಿರುವ ಸಂದರ್ಭದಲ್ಲಿ ರೈತರ ಬೆಳೆ ರಕ್ಷಣೆಗೆ ಮುಂದಾಗ ಅಮಾಯಕ ಅರಣ್ಯ ವೀಕ್ಷಕ ಇಹಲೋಕ ತ್ಯಜಿಸಿರುವುದು ನೋವುಂಟು ಮಾಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಗುವುದು.
ಶಾಸಕ ಅನಿಲ್ ಭೇಟಿ: ಕಾಡಾನೆ ದಾಳಿಗೆ ವಾಚರ್ ಬಲಿಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಶವಾಗಾರಕ್ಕೆ ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.