ಬೆಹ್ರಾಂಪುರ್(ಒಡಿಶಾ): ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ 20 ವರ್ಷದ ಯುವಕ ಕುಸಿದು ಬಿದ್ದು ಕೊನೆಯುಸಿರೆಳೆದಿರುವ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಅಧಿಕಾರಿಗಳು ಶನಿವಾರ (ಮಾರ್ಚ್ 25) ತಿಳಿಸಿದ್ದಾರೆ.
ಇದನ್ನೂ ಓದಿ:ಎರಡು ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 58 ಲಕ್ಷ ರೂ. ವಶ
ಮೃತ ಯುವಕನನ್ನು ದೀಪ್ತಿ ರಂಜನ್ ದಾಸ್ ಎಂದು ಗುರುತಿಸಲಾಗಿದೆ. ಈತ ಗಂಜಾಮ್ ಜಿಲ್ಲೆಯ ಶ್ಯಾಮ್ ಸುಂದರ್ ಪುರ್ ಪ್ರದೇಶದ ನಿವಾಸಿ. ಛಾತ್ರಾಪುರ್ ಪೊಲೀಸ್ ರಿಸರ್ವ್ ಮೈದಾನದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿಗೆ ನಡೆದ ದೈಹಿಕ ಪರೀಕ್ಷೆಯಲ್ಲಿ ದಾಸ್ 1,600 ಮೀಟರ್ ಓಟದಲ್ಲಿ ಭಾಗವಹಿಸಿದ್ದು, ಏತನ್ಮಧ್ಯೆ ಕುಸಿದು ಬಿದ್ದು ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಕುಸಿದು ಬಿದ್ದ ಯುವಕನನ್ನು ಕೂಡಲೇ ಛಾತ್ರಾಪುರ್ ಸಬ್ ಡಿವಿಶನಲ್ ಆಸ್ಪತ್ರೆಗೆ ನಂತರ ಎಂಕೆಸಿಜಿ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ ದಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಗಂಜಾಮ್ ಪೊಲೀಸ್ ವರಿಷ್ಠಾಧಿಕಾರಿ ಜಗ್ ಮೋಹನ್ ಮೀನಾ ತಿಳಿಸಿದ್ದಾರೆ.
1,600 ಮೀಟರ್ ಓಟದ ಸ್ಪರ್ಧೆ ಆರಂಭಕ್ಕೂ ಮೊದಲು ದಾಸ್ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದ. ಆದರೆ ಆತನ ಸಾವು ಯಾವ ಕಾರಣದಿಂದ ಆಗಿದೆ ಎಂಬುದು ಮರಣೋತ್ತರ ಪರೀಕ್ಷೆಯ ನಂತರವೇ ತಿಳಿದು ಬರಲಿದೆ ಎಂದು ಮೀನಾ ತಿಳಿಸಿರುವುದಾಗಿ ವರದಿಯಾಗಿದೆ.