Advertisement

ಕೋವಿಡ್‌ ನಿಂದ ಪತಿ ಕಳೆದುಕೊಂಡ ವಿಧವೆಯನ್ನು ಮದುವೆಯಾದ ಪತಿಯ ಆತ್ಮೀಯ ಸ್ನೇಹಿತ!

11:48 AM Feb 07, 2022 | Team Udayavani |

ಚಾಮರಾಜನಗರ: ಕೋವಿಡ್‍ನಿಂದ ಮೃತಪಟ್ಟ ಆತ್ಮೀಯ ಗೆಳೆಯನ ಕುಟುಂಬಕ್ಕೆ ಆಧಾರವಾಗಬೇಕೆಂದು ನಿರ್ಧರಿಸಿ ಯುವಕನೋರ್ವ, ಗೆಳೆಯನ ಪತ್ನಿಯನ್ನು ಪುನರ್ವಿವಾಹವಾದ ಅಪರೂಪದ ಪ್ರಸಂಗವಿದು.

Advertisement

ಕಳೆದ ಎರಡು ವರ್ಷಗಳಿಂದ ಕೋವಿಡ್ -19 ಸೋಂಕು ಜಗತ್ತಿನಾದ್ಯಂತ ಅನೇಕ ಅಲ್ಲೋಲ ಕಲ್ಲೋಲಗಳಿಗೆ ಕಾರಣವಾಗಿದೆ. ಲಕ್ಷಾಂತರ ಕುಟುಂಬಗಳ ಜೀವನ ವಿಧಾನವನ್ನೇ ಬದಲಿಸಿದೆ. ಅನೇಕರ ಒಡನಾಡಿಗಳನ್ನು ಕಸಿದುಕೊಂಡಿದೆ. ಅನೇಕರ ಬಾಳಿನಲ್ಲಿ ನಿರಾಶೆಯ ಕಾರ್ಮೋಡ ಮೂಡಿಸಿದೆ. ಇಂಥ ಕಾರ್ಮೋಡದ ನಡುವೆಯೇ ಒಂದು ಕಿರಣದಂತೆ ಈ ಪುನರ್‌ವಿವಾಹ ನಡೆದಿದೆ.

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ (41 ವರ್ಷ) ಹಾಗೂ ಹನೂರು ಪಟ್ಟಣದ ಅಂಬಿಕಾ (30 ವರ್ಷ) 8 ವರ್ಷದ ಹಿಂದೆ ವಿವಾಹವಾಗಿದ್ದರು. ಚೇತನ್‌ ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ಬೆಂಗಳೂರಿನಲ್ಲೇ ನೆಲೆಸಿದ್ದರು. ಈ ದಂಪತಿಗೆ 7 ವರ್ಷದ ಪುತ್ರ ಇದ್ದಾನೆ. ಅನೇಕ ಕುಟುಂಬಗಳನ್ನು ತಲ್ಲಣಗೊಳಿಸಿದ ಕೋವಿಡ್ ಸೋಂಕು ಈ ಕುಟುಂಬವನ್ನೂ ಇನ್ನಿಲ್ಲದಂತೆ ಕಂಗೆಡಿಸಿತು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್‌ ಕುಮಾರ್ ಕೋವಿಡ್ ಸೋಂಕು ತಗುಲಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ, ಫಲಕಾರಿಯಾಗದೇ ಮೃತಪಟ್ಟರು.

ತನ್ನ ಪತಿಯ ಸಾವಿನಿಂದ ಅಂಬಿಕಾ ಕಂಗೆಟ್ಟರು. ಶೂನ್ಯ ಭಾವ ಆವರಿಸಿತು. ಡಿಪ್ರೆಷನ್‌ಗೊಳಗಾಗಿ ಆತ್ಮಹತ್ಯೆಯ ಯೋಚನೆ ಮಾಡಿದರು. ಈ ಸಂದರ್ಭದಲ್ಲಿ ಆ ಕುಟುಂಬದತ್ತ ಸಹಾಯ ಹಸ್ತ ಚಾಚಿದವರು ಚೇತನ್‌ ಕುಮಾರ್ ಗೆಳೆಯರು. ಅಂಬಿಕಾ ಅವರ ಬಳಿ ತೆರಳಿ, ಸಾಂತ್ವನ ಸಮಾಧಾನ ಹೇಳಿದರು.

ಇದನ್ನೂ ಓದಿ:ಲತಾ ಮಂಗೇಶ್ಕರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಶಾರುಖ್: ‘ಜಾತ್ಯಾತೀತ ಭಾರತ’ ಎಂದ ನೆಟ್ಟಿಗರು

Advertisement

ಚೇತನ್‌ ಕುಮಾರ್ ಅವರ ಆತ್ಮೀಯ ಗೆಳೆಯರಾಗಿದ್ದ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದ ಎಂ.ಲೋಕೇಶ್ (36 ವ) ತನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಿರ್ಧರಿಸಿದರು. ಲೋಕೇಶ್ ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.  ಚೇತನ್ ಹಾಗೂ ಲೋಕೇಶ್ ಅವರದು 13 ವರ್ಷಗಳ ಗೆಳೆತನ. ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಹಾಸ್ಟೆಲ್‌ನಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದವರು. ತನ್ನ ಗೆಳೆಯನ ವಿಧವಾ ಪತ್ನಿಯನ್ನು ಮದುವೆಯಾಗಲು ನಿರ್ಧರಿಸಿದರು. ಈ ವಿಚಾರವನ್ನು ಅಂಬಿಕಾ ತಂದೆ ತಾಯಿಯ ಬಳಿ ಹಾಗೂ ಚೇತನ್‌ ಕುಮಾರ್ ತಂದೆ ತಾಯಿಯ ಬಳಿ ಪ್ರಸ್ತಾಪಿಸಿದರು. ಎರಡೂ ಕುಟುಂಬಗಳು ಈ ಪ್ರಸ್ತಾವಕ್ಕೆ ಸಂತಸ ವ್ಯಕ್ತಪಡಿಸಿದವು. ನಂತರ ಅಂಬಿಕಾ ಅವರಿಗೆ ತಿಳಿಸಿದರು. ಪತಿಯ ಸಾವಿನ ನೋವಿನಿಂದ ಹೊರಬಾರದ ಅಂಬಿಕಾ, ಆರಂಭದಲ್ಲಿ ಇದಕ್ಕೆ ಸಮ್ಮತಿಸಲಿಲ್ಲ. ಹಲವು ತಿಂಗಳ ಬಳಿಕ ತಂದೆ ತಾಯಿ, ಅತ್ತೆ ಮಾವ ಅವರ ಮನವೊಲಿಕೆಯ ಬಳಿಕ ಅಂಬಿಕಾ ಈ ಮದುವೆಗೆ ಒಪ್ಪಿದರು.

ಇದನ್ನೂ ಓದಿ:ಪಂಚಮಸಾಲಿ ಸಮುದಾಯದಿಂದ ಸಂಪುಟ ಸೇರುವುದು ಯಾರು?ಯತ್ನಾಳ್ ಸೇರ್ಪಡೆಗೆ ವಿರೋಧ

ಚೇತನ್ ಅವರ ತಂದೆ ತಾಯಿ ಹಾಗೂ ಅಂಬಿಕಾ ಅವರ ತಂದೆ ತಾಯಿಗಳ ಪಾತ್ರ ಈ ವಿವಾಹದಲ್ಲಿ ಮಹತ್ವದ್ದು. ಮಗನನ್ನು ಕಳೆದುಕೊಂಡ ನೋವಿದ್ದರೂ, ತಮ್ಮ ಸೊಸೆ ಚೆನ್ನಾಗಿರಲಿ ಎಂಬ ಆಶಯದಿಂದ ಮದುವೆಗೆ ಒಪ್ಪಿದರು. ಅಂಬಿಕಾ ತಂದೆ ತಾಯಿ ಸಹ ಸಮಾಜದ ಕಟ್ಟುಪಾಡುಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮ ಮಗಳ ಮರುವಿವಾಹಕ್ಕೆ ಸಮ್ಮತಿಸಿದರು.

ಕಳೆದ ತಿಂಗಳು ಜನವರಿ 27 ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆಯಿತು. ಲೋಕೇಶ್ ಅವರು ಅಂಬಿಕಾ ಅವರನ್ನು ಪುನರ್‌ವಿವಾಹವಾಗುವ ಮೂಲಕ ಮಾದರಿಯಾದರು. ಅಂಬಿಕಾ ಅವರ 7 ವರ್ಷದ ಪುತ್ರ ಸಹ ತಾಯಿಯ ಮದುವೆಗೆ ಸಾಕ್ಷಿಯಾಗಿದ್ದ.

ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಹಂಸಭಾವಿಯ ಸಿದ್ಧಲಿಂಗಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಬಸವಲಿಂಗಸ್ವಾಮೀಜಿ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಪರಮಶಿವಯ್ಯ ಈ ಮಾದರಿ ಮದುವೆಯ ಸಮ್ಮುಖ ವಹಿಸಿದ್ದರು.

ಚೇತನ್ ನನಗೆ ಆತ್ಮೀಯ ಗೆಳೆಯ. 13 ವರ್ಷಗಳ ಗೆಳೆತನ ನಮ್ಮದು. ನನ್ನ ಗೆಳೆಯನ ಕುಟುಂಬದಲ್ಲಿ ಹೀಗೆ ನಡೆಯಿತಲ್ಲ ಅಂತ ತುಂಬಾ ನೋವಾಯಿತು. ಅಂಬಿಕಾ ಡಿಪ್ರೆಷನ್‌ಗೂ ಒಳಗಾಗಿದ್ದರು.  ಗೆಳೆಯನ ಕುಟುಂಬಕ್ಕೆ ಆಸರೆಯಾಗಬೇಕೆಂಬ ಉದ್ದೇಶದಿಂದ ಈ ವಿವಾಹದ ಪ್ರಸ್ತಾಪ ಮುಂದಿಟ್ಟೆ. ಗೆಳೆಯರ ಒತ್ತಾಸೆ ಹಾಗೂ ಹಿರಿಯರ ಸಮ್ಮತಿಯಿಂದ ಮದುವೆ ನಡೆಯಿತು.  -ಎಂ. ಲೋಕೇಶ್

Advertisement

Udayavani is now on Telegram. Click here to join our channel and stay updated with the latest news.

Next