ದುಬೈ:”ನಾನು ನನ್ನ ಮನ್ ಕಿ ಬಾತ್ ಹೇಳಲು ಇಚ್ಛಿಸುವುದಿಲ್ಲ. ಬದಲಿಗೆ ನಿಮ್ಮ ಮನದ ಮಾತುಗಳು ಹಾಗೂ ಸಂಕಷ್ಟಗಳನ್ನು ಆಲಿಸಲು ಬಯಸುತ್ತೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ದುಬೈನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದ್ದಾರೆ. ಎರಡು ದಿನಗಳ ದುಬೈ ಮತ್ತು ಅಬುಧಾಬಿ ಪ್ರವಾಸದಲ್ಲಿರುವ ರಾಹುಲ್ ಅವರು, ಭಾರತೀಯ ನೌಕರರೊಂದಿಗೆ ಮಾತನಾ ಡುತ್ತಾ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮವನ್ನು ಈ ರೀತಿಯಾಗಿ ಟೀಕಿಸಿದ್ದಾರೆ. ಜಬೇಲ್ ಅಲಿ ಕಾರ್ಮಿಕರ ಕಾಲೊನಿಗೆ ಭೇಟಿ ನೀಡಿದ ರಾಹುಲ್, ಅಲ್ಲಿನ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ದುಬೈನಲ್ಲಿನ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆಯ ಬಗ್ಗೆಯೂ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಲೋಕಸಭೆ ಚುನಾವಣೆ ಕುರಿತೂ ಪ್ರಸ್ತಾಪಿಸಿದ ಅವರು, ಯುದ್ಧ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಘೋಷಣೆಯನ್ನೂ ಮಾಡಿದರು. ಇದಕ್ಕೂ ಮುನ್ನ ರಾಹುಲ್ ದುಬೈನಲ್ಲಿನ ಉದ್ಯಮಿಗಳ ಜತೆಯೂ ಸಮಾಲೋಚನೆ ನಡೆಸಿದರು.