ಹೊಸದಿಲ್ಲಿ: ಈ ವರ್ಷದ ಮೊದಲ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ದರ್ಶನ್ ಎಂಬ ವ್ಯಕ್ತಿಯ ಹೆಸರನ್ನು ಪ್ರಸ್ತಾವಿಸಿದ್ದಾರೆ. ಅಷ್ಟೇ ಅಲ್ಲ, ದೇವದಾಸಿಯರ ಕಲ್ಯಾಣಕ್ಕಾಗಿ ತನ್ನ ಜೀವನವನ್ನೇ ಮುಡುಪಿಟ್ಟಿರುವ ಸೀತವ್ವ ಜೋಡಟ್ಟಿ ಬಗ್ಗೆಯೂ ಪ್ರಸ್ತಾವಿಸಿದ್ದಾರೆ. ಜನೌಷಧ ಯೋಜನೆಯಿಂದ ಹೇಗೆ ತನಗೆ ಲಾಭವಾಯಿತು ಎಂಬುದನ್ನು ಮೈಸೂರಿನ ದರ್ಶನ್, ಮೈ ಗವರ್ನಮೆಂಟ್ ಆ್ಯಪ್‌ನಲ್ಲಿ ಹೇಳಿದ್ದರು. ಜನೌಷಧ ಮಳಿಗೆಯಿಂದ ಔಷಧ ಖರೀದಿಸಿದ್ದರಿಂದ ಶೇ. 75ರಷ್ಟು ವೈದ್ಯ ಕೀಯ ವೆಚ್ಚ ಉಳಿತಾಯವಾಗಿದೆ ಎಂದು ದರ್ಶನ್ ಹೇಳಿದ್ದರು. ಅದನ್ನು ಪ್ರಧಾನಿ ಮೋದಿ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿದ್ದಾರೆ.
ಇನ್ನೊಂದೆಡೆ ಇತ್ತೀಚೆಗಷ್ಟೇ ಪದ್ಮಶ್ರೀ ಪುರ ಸ್ಕಾರಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಸೀತವ್ವ ಜೋಡಟ್ಟಿ ಬಗ್ಗೆಯೂ ಮೋದಿ ಪ್ರಸ್ತಾವಿಸಿದ್ದಾರೆ. ಬಾಲ್ಯದಲ್ಲೇ ಸ್ವತಃ ದೇವದಾಸಿ ಯಾಗಿದ್ದ ಅವರು, ದೇವದಾಸಿಯರ ಕಲ್ಯಾಣ ಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದಾರೆ ಎಂದಿದ್ದಾರೆ. ಅಲ್ಲದೆ ಗಗನಯಾತ್ರಿ ಕಲ್ಪನಾ ಚಾವ್ಲಾ ಸಹಿತ ಹಲವು ಮಹಿಳೆಯರ ಸಾಧನೆ ಯನ್ನೂ ಇದೇ ವೇಳೆ ಅವರು ಕೊಂಡಾಡಿ ದ್ದಾರೆ. ಓರ್ವ ಹೆಣ್ಣು ಮಗಳು 10 ಪುತ್ರರಿಗೆ ಸಮಾನ ಎಂದು ಅವರು ಹೇಳಿದ್ದಾರೆ.
ಪಾರದರ್ಶಕ ಪದ್ಮ: ಪದ್ಮ ಪುರಸ್ಕಾರಕ್ಕೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗ ಪಾರದರ್ಶಕವಾಗಿದೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳದ ಮತ್ತು ನಗರದಿಂದ ದೂರವಿದ್ದೇ ಸಾಧನೆ ಮಾಡಿದವರೂ ಈ ಬಾರಿ ಪುರಸ್ಕಾರಕ್ಕೆ ಆಯ್ಕೆಯಾಗಿ ದ್ದಾರೆ. ಈ ಬಾರಿಯ ಎಲ್ಲ ಪದ್ಮ ಪುರಸ್ಕೃತರ ಕಥೆಗಳನ್ನೂ ಜನರು ಓದಬೇಕು. ಪದ್ಮ ಪುರಸ್ಕಾರಕ್ಕೆ ಈಗ ಯಾರು ಬೇಕಾದರೂ ಯಾರನ್ನಾದರೂ ನಾಮನಿರ್ದೇಶನ ಮಾಡ ಬಹುದು ಎಂದು ಮೋದಿ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಸಾಧಕರ ಹೆಸರನ್ನು ಸೂಚಿಸಬಹುದು ಎಂದರು.
ಭ್ರಷ್ಟರನ್ನು ಬಿಡಲ್ಲ!: ಭ್ರಷ್ಟರು ಶ್ರೀಮಂತ ರಾಗಿದ್ದರೂ ಅವರನ್ನು ಬಿಡುವುದಿಲ್ಲ. ಈಗಾಗಲೇ ಮೂವರು ಮಾಜಿ ಮುಖ್ಯಮಂತ್ರಿಗಳು ಜೈಲು ಸೇರಿದ್ದಾರೆ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ರನ್ನು ಪರೋಕ್ಷವಾಗಿ ಉಲ್ಲೇಖೀಸಿ ಪ್ರಧಾನಿ ಮೋದಿ ಹೇಳಿದರು. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯುವಕರ ಸಹಕಾರ ಅಗತ್ಯವಿದೆ ಎಂದು ಮೋದಿ ದಿಲ್ಲಿಯಲ್ಲಿ ನಡೆದ ಎನ್‌ಸಿಸಿ ರ್ಯಾಲಿಯಲ್ಲಿ ತಿಳಿಸಿದರು.