ಮಲಪ್ಪುರಂ: ಇತ್ತೀಚೆಗಷ್ಟೇ ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 24 ವರ್ಷದ ಯುವಕನಿಗೆ ನಿಫಾ ವೈರಸ್ ಸೋಂಕು ತಗುಲಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ(ಸೆ15) ತಿಳಿಸಿದ್ದಾರೆ.
ಪ್ರಾದೇಶಿಕ ವೈದ್ಯಾಧಿಕಾರಿ ನಡೆಸಿದ ಪರೀಕ್ಷೆ ಬಳಿಕ ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿತ್ತು.ಲಭ್ಯವಿರುವ ಮಾದರಿಗಳನ್ನು ತತ್ ಕ್ಷಣವೇ ಪರೀಕ್ಷೆಗೆ ಕಳುಹಿಸಲಾಗಿದ್ದು ಅದು ಧನಾತ್ಮಕವಾಗಿದೆ” ಎಂದು ಸಚಿವೆ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ರಾಜ್ಯಕ್ಕೆ ಆಗಮಿಸಿದ ಮಲಪ್ಪುರಂ ಮೂಲದ ವ್ಯಕ್ತಿ ಸೆಪ್ಟೆಂಬರ್ 9 ರಂದು ನಿಧನ ಹೊಂದಿದ್ದು ಲಭ್ಯವಿರುವ ಮಾದರಿಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಫಲಿತಾಂಶಗಳು ಪಾಸಿಟಿವ್ ಫಲಿತಾಂಶವನ್ನು ಸೂಚಿಸಿವೆ ಎಂದು ಮಲಪ್ಪುರಂ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ನಂತರ ಆರೋಗ್ಯ ಸಚಿವರು ಶನಿವಾರ ರಾತ್ರಿಯೇ ಉನ್ನತ ಮಟ್ಟದ ಸಭೆಯನ್ನು ನಡೆಸಿ ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಗಳನ್ನು ಪಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಏತನ್ಮಧ್ಯೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಭಾನುವಾರದ ಫಲಿತಾಂಶಗಳು ಸೋಂಕನ್ನು ದೃಢಪಡಿಸಿವೆ. ಶನಿವಾರ ರಾತ್ರಿಯೇ 16 ಸಮಿತಿಗಳನ್ನು ರಚಿಸಲಾಗಿದ್ದು, 151 ಜನರ ಸಂಪರ್ಕ ಪಟ್ಟಿಯನ್ನು ಗುರುತಿಸಲಾಗಿದೆ ಎಂದು ಸಚಿವೆ ಹೇಳಿದ್ದಾರೆ.
ನಿಫಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪುರಂನ ಬಾಲಕ ಜುಲೈ 21 ರಂದು ಮೃತಪಟ್ಟಿದ್ದ. ಅದು ಕೇರಳದ ಈ ವರ್ಷದ ಸೋಂಕು ದೃಢಪಟ್ಟ ಮೊದಲ ಪ್ರಕರಣವಾಗಿದೆ.