Advertisement

ಅಂದು ಜೀವ ಉಳಿಸಿತ್ತು…ತನ್ನ 2 ಆನೆಗಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಬರೆದ ವ್ಯಕ್ತಿ

05:00 PM Jun 10, 2020 | Nagendra Trasi |

ಪಾಟ್ನಾ:ಭಾರತದಲ್ಲಿ ದಿನದಿಂದ ದಿನಕ್ಕೆ ಪ್ರಾಣಿಗಳ ಹಿಂಸೆ ಹೆಚ್ಚುತ್ತಿರುವ ನಡುವೆ ಕಳೆದ ಕೆಲವು ವಾರಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ದುರಂತದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕೇರಳದ ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ್ದ ಪೈನಾಪಲ್ ಹಣ್ಣು ತಿಂದು ಸಾವನ್ನಪ್ಪಿರುವ ದಾರುಣ ಘಟನೆಯ ಉದಾಹರಣೆಯೂ ಒಂದಾಗಿದೆ. ಆದರೆ ಕ್ರೌರ್ಯದ ನಡುವೆ ಮಾನವೀಯತೆ ಮತ್ತೊಂದು ಮುಖ ಬಿಹಾರದಲ್ಲಿ ಅನಾವರಣಗೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಬಿಹಾರದ ಪ್ರಾಣಿ ಪ್ರೇಮಿ ಮೊಹಮ್ಮದ್ ಅಖ್ತರ್ (50ವರ್ಷ) ತಾನು ಸಾಕಿರುವ ಎರಡು ಆನೆಗಳಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಇಡೀ ಆಸ್ತಿಯನ್ನು ಬರೆದಿದ್ದಾರೆ. ಎರಡು ಆನೆಗಳಲ್ಲಿ ಒಂದು ಆನೆ ತನ್ನನ್ನು ಕ್ರಿಮಿನಲ್ ಗಳಿಂದ ಜೀವ ರಕ್ಷಿಸಿತ್ತು ಎಂದು ಅಖ್ತರ್ ತಿಳಿಸಿದ್ದಾರೆ.

ಪಾಟ್ನಾದ ಫುಲ್ವಾರಿ ಷರೀಫ್ ಸಮೀಪದ ಜಾನಿಪುರ್ ನಿವಾಸಿಯಾಗಿರುವ ಮೊಹಮ್ಮದ್ ಅಖ್ತರ್ 20 ವರ್ಷದ ಪ್ರಾಯದ ಮೋತಿ ಹಾಗೂ 15 ವರ್ಷ ಪ್ರಾಯದ ರಾಣಿ ಎಂಬ ಆನೆಗಳನ್ನು ಸಾಕಿ ಸಲಹುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಕುಟುಂಬದ ಪರಂಪರೆಯಾಗಿ ಈ ಆನೆಗಳು ನನಗೆ ಸಿಕ್ಕಿದ್ದವು ಎಂದು ತಿಳಿಸಿರುವ ಅಖ್ತರ್, ಮೋತಿ ಮತ್ತು ರಾಣಿ ಎಂಬ ಆನೆಯನ್ನು ಮಕ್ಕಳಂತೆ ಸಾಕುತ್ತಿದ್ದೇವೆ. ನನ್ನ ಹುಡುಗಾಟಿಕೆಯಿಂದಲೂ ನಾನು ಆನೆಗಳ ಜತೆಯೇ ಬದುಕಿದ್ದೇನೆ. ಈ ಎರಡೂ ಆನೆಗಳು ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ತಿಳಿಸಿದ್ದಾರೆ.

” ಯಾವಾಗ ನಾನು ಸಾಯುತ್ತೇನೋ ಆ ಸಂದರ್ಭದಲ್ಲಿ ಈ ಎರಡು ಆನೆಗಳು ಹಸಿವಿನಿಂದ ಕಂಗೆಡಬಾರದು. ಈ ಹಿನ್ನೆಲೆಯಲ್ಲಿ ಈ ಎರಡು ಆನೆಗಳಿಗಾಗಿ 6.25 ಎಕರೆ ಭೂಮಿಯನ್ನು ನೀಡುವ ಬಗ್ಗೆ ವಿಲ್ ಬರೆದಿಟ್ಟಿರುವುದಾಗಿ ಅಖ್ತರ್” ಐಎಎನ್ ಎಸ್ ಗೆ ವಿವರಿಸಿದ್ದಾರೆ.

Advertisement

ಈ ವೇಳೆ ಮೋತಿ ಹೇಗೆ ತನ್ನ ಜೀವ ರಕ್ಷಿಸಿತ್ತು ಎಂಬ ವಿಷಯವನ್ನು ಅಖ್ತರ್ ಬಹಿರಂಗಪಡಿಸಿದ್ದಾರೆ, ತನ್ನ ಮಾವುತನ ಜತೆಗೆ ಮೋತಿ ಭೋಜ್ ಪುರ್ ಜಿಲ್ಲೆಯ ಶಾಪುರ್ ಪ್ರದೇಶಕ್ಕೆ ತೆರಳಿತ್ತು. ಅಲ್ಲಿ ಮೋತಿ ಅನಾರೋಗ್ಯಕ್ಕೆ ಒಳಗಾಗಿತ್ತು. ವಿಷಯ ತಿಳಿದ ನಾನು ಕೂಡಲೇ ಚಿಕಿತ್ಸೆ ನೀಡಲು ಅಲ್ಲಿಗೆ ಹೋಗಿದ್ದೆ. ಒಂದು ದಿನ ನಾನು ನಿದ್ದೆ ಮಾಡುತ್ತಿದ್ದಾಗ ಮೋತಿಯ ಗರ್ಜನೆ ಶಬ್ದ ಕೇಳಿ ಎಚ್ಚರಗೊಂಡಿದ್ದೆ. ಆಗ ಕಿಟಕಿಯ ಹೊರಭಾಗದಲ್ಲಿ ವ್ಯಕ್ತಿಯೊಬ್ಬ ನನ್ನ ಗುರಿಯಾಗಿರಿಸಿಕೊಂಡು ಪಿಸ್ತೂಲ್ ಹಿಡಿದು ನಿಂತಿರುವುದನ್ನು ಗಮನಿಸಿದೆ. ನಂತರ ನಾನು ಜೀವ ಉಳಿಸಿಕೊಳ್ಳಲು ಓಡಿಹೋಗಿದ್ದೆ ಎಂದು ಹಳೆಯ ನೆನಪನ್ನು ಬಿಚ್ಚಿಟ್ಟಿರುವುದಾಗಿ ವರದಿ ತಿಳಿಸಿದೆ.

ತನ್ನ ಕುಟುಂಬದ ಸದಸ್ಯರೇ ಪ್ರಾಣಿ ಕಳ್ಳಸಾಗಾಣೆದಾರರ ಜತೆ ಕೈಜೋಡಿಸಿದ್ದು, ಈ ಆನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖ್ತರ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಎರಡು ಆನೆಗಳ ಹೆಸರಿಗೆ ಜಮೀನು ಬರೆದಿದ್ದರಿಂದ ತನ್ನ ಕುಟುಂಬದ ಸದಸ್ಯರಿಂದ ಜೀವಕ್ಕೆ ಅಪಾಯ ಇದ್ದಿರುವುದಾಗಿ ಅಖ್ತರ್ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next