ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಡಬಲ್ ಮರ್ಡರೊಂದು ನಡೆದಿದೆ. ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ರವಿಕುಮಾರ್ ಕೊಲೆ ಮಾಡಿದ ಆರೋಪಿ. ಪತ್ನಿ ಸಾವಿತ್ರಿ ಮತ್ತು ಅತ್ತೆ ಸರೋಜಮ್ಮ ಮೃತ ದುರ್ದೈವಿಗಳು. ಅವರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಪಿ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿ ನಡುವೆ ಕೌಟುಂಬಿಕ ಕಲಹವಿತ್ತು. ಇದೇ ವಿಚಾರವಾಗಿ ಹಲವು ಬಾರಿ ಜಗಳ ಆಗಿತ್ತು. ಸೋಮವಾರ ರಾತ್ರಿಯೂ ಇದೇ ವಿಚಾರವಾಗಿ ಜಗಳವಾಗಿತ್ತು.
ಇದನ್ನೂ ಓದಿ:ವಿಟ್ಲ ಪಟ್ಟಣ ಪಂಚಾಯತ್ : 50 ದಿನ ಕಳೆದರೂ ಆಡಳಿತ ವ್ಯವಸ್ಥೆಗೆ ಚಾಲನೆ ಸಿಕ್ಕಿಲ್ಲ!
ಮಂಗಳವಾರ ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿದ್ದ ರವಿ ಕುಮಾರ್ ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಎಳನೀರು ಕೊಚ್ಚುವ ಮಚ್ಚಿನಿಂದ ರವಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಅತ್ತೆ ಸರೋಜಮ್ಮನ ಮೇಲೆಯೂ ಹಲ್ಲೆ ನಡೆಸಿದ್ದು, ರಕ್ತಸ್ರಾವಗೊಂಡು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಕೃತ್ಯ ಬಳಿಕ ಗೋವಿಂದರಾಜನಗರ ಪೊಲೀಸರ ಮುಂದೆ ಹಾಜರಾದ ಆರೋಪಿ ರವಿ ಕುಮಾರ್ ಹತ್ಯೆ ಬಗ್ಗೆ ಮಾಹಿತಿ ನೀಡಿ ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.