ಬೆಂಗಳೂರು: ಸಿಕ್ಕಿ ಮೂಲದ ಯುವಕನೊಬ್ಬನಿಗೆ ಚೀನೀ ಎಂದು ಜನಾಂಗೀಯ ನಿಂದನೆ ಮಾಡಿ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಆಗಸ್ಟ್ 15 ರ ತಡ ರಾತ್ರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಭವಿಸಿದ್ದು, ಅಪರಿಚಿತ ವ್ಯಕ್ತಿಗಳು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಿಕ್ಕಿಂನ ರಿಂಚನ್‌ಪಾಂಗ್ ಪಟ್ಟಣದ ನಿವಾಸಿ ದಿನೇಶ್ ಸುಬ್ಬಾ (31) ಮೂಗು ಸೇರಿದಂತೆ ದೇಹದಲ್ಲಿ ಅನೇಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಸುಬ್ಬ ಏಳು ತಿಂಗಳ ಹಿಂದೆ ಪತ್ನಿ ಮತ್ತು ಮೂರು ತಿಂಗಳ ಮಗುವಿನೊಂದಿಗೆ ಬೆಂಗಳೂರಿಗೆ ಬಂದಿದ್ದರು. ನಗರದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 15 ರಂದು, ಅವರು ಕೆಲವು ಸ್ನೇಹಿತರೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿ ತಡರಾತ್ರಿಯಲ್ಲಿ ಒಬ್ಬರೇ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ‘ಚೈನೀಸ್’ ಎಂದು ಕರೆದು ಥಳಿಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡು ನೋವಿನಿಂದ ಒದ್ದಾಡುತ್ತಿದ್ದ ದಿನೇಶ್ ಸುಬ್ಬಾನನ್ನು ಪೊಲೀಸ್ ಗಸ್ತು ತಂಡ ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. .
ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ದಾಳಿಯಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.