Advertisement

ಮನುಷ್ಯ ಸ್ನೇಹಿ ಮೊಸಳೆಗಳು!

06:00 AM Jul 05, 2018 | Team Udayavani |

– 15ನೇ ಶತಮಾನದಿಂದಲೂ ಇಲ್ಲಿ ಮೊಸಳೆಗಳಿವೆ
-ಮೊಸಳೆಗಳು ಇದುವರೆಗೂ ಆಕ್ರಮಣ ಮಾಡಿಲ್ಲ
-ವರ್ಷಕ್ಕೊಮ್ಮೆ ಮೊಸಳೆ ಹಬ್ಬ

Advertisement

ಮೊಸಳೆಗಳೆಂದರೆ ನಮಗೆಲ್ಲರಿಗೂ ಭಯ. ಅದು ಈಗಲ್ಲ ಅನಾದಿ ಕಾಲದಿಂದಲೂ ಇದೆ. ಪುರಾಣ ಕಾಲದ ಕತೆಗಳಲ್ಲೂ ಮೊಸಳೆ ಖಳನಾಯಕನಾಗಿ ಬಿಂಬಿಸಲ್ಪಟ್ಟಿದೆ. ಮೊಸಳೆ ಎಂದಾಕ್ಷಣ ಕೆರೆಯ ದಡದಲ್ಲಿ ಹೊಂಚು ಹೊಕಿಕೊಂಡು ನೀರಿನಡಿ ಅಡಗಿ ಮನುಷ್ಯರೋ, ಪ್ರಾಣಿಗಳ್ಳೋ ಬಂದರೆ ಕಚ್ಚಿ ಎಳೆದುಕೊಂಡು ಹೋಗುವ ಚಿತ್ರಣವೇ ನಮ್ಮ ಕಣ್ಣ ಮುಂದೆ ಬರುತ್ತದೆ. ಮನುಷ್ಯನೊಂದಿಗೆ ಸ್ನೇಹ ಬೆಳೆಸಿರುವ ಮೊಸಳೆಗಳ ಚಿತ್ರಣ ಇಲ್ಲಿದೆ…

ಮೊಸಳೆಗಳು ಮನುಷ್ಯನ ಮೇಲೆ ಆಕ್ರಮಣ ನಡೆಸಿರುವ ನಿದರ್ಶನಗಳಿರುವುದು ನಿಜ. ಆದರೆ, ಮನುಷ್ಯನಿಗೆ ಏನೂ ಹಾನಿ ಮಾಡದೆ ಸ್ನೇಹಿತರಂತೆ ಇರುವ ಮೊಸಳೆಗಳಿವೆ ಎಂದರೆ ನಂಬುತ್ತೀರಾ? ಮನುಷ್ಯ ಸ್ನೇಹಿ ಮೊಸಳೆ ಇರಲು ಸಾಧ್ಯವೇ ಇಲ್ಲ ಎನ್ನುವವರು ಆಫ್ರಿಕಾದ ಬುರ್ಕಿನಾಫಾಸೋ ಎಂಬ ಜಾಗಕ್ಕೆ ಹೋಗಬೇಕು. ಅಲ್ಲೇ ಇರೋದು ಮನುಷ್ಯ ಸ್ನೇಹಿ ಮೊಸಳೆಗಳು. ಘಾನಾದ ರಾಜಧಾನಿ ಔಗಾಡೌಗಾದಿಂದ 30 ಕಿ. ಮೀ. ದೂರದಲ್ಲಿರುವ ಬಝೌಲೆ ಎಂಬ ಹಳ್ಳಿಯಲ್ಲಿ ಒಂದು ಕೊಳವಿದೆ. ಅದರಲ್ಲಿರುವ ಮೊಸಳೆಗಳು ಹದಿನೈದನೆಯ ಶತಮಾನದಿಂದಲೂ ಹಳ್ಳಿಯ ಜನರೊಂದಿಗೆ ಬೆರೆತು ಬದುಕುತ್ತಿವೆ. ಪ್ರಸ್ತುತ ಈ ಕೊಳದಲ್ಲಿರುವ ಮೊಸಳೆಗಳ ಸಂಖ್ಯೆ 110. 

ಮೊಸಳೆ ಸವಾರಿ
ಇಲ್ಲಿನ ಮೊಸಳೆಗಳು ಎಷ್ಟು ಹೊಂದಿಕೊಂಡಿವೆಯೆಂದರೆ ಅವುಗಳ ಬೆನ್ನ ಮೇಲೆ ಮಕ್ಕಳೂ ಸವಾರಿ ಮಾಡಬಹುದು. ಅವುಗಳ ಪಕ್ಕದಲ್ಲಿ ನೀರಿಗಿಳಿದು ಈಜಬಹುದು, ಹೆಂಗಸರು ನಿರ್ಭಯವಾಗಿ ಬಟ್ಟೆಗಳನ್ನು ತೊಳೆಯುತ್ತಾರೆ. ಇದುವರೆಗೂ ಮೊಸಳೆಗಳು ಯಾರ ಮೇಲೂ ಆಕ್ರಮಣ ಮಾಡಿಲ್ಲ. ಯಾಕೆ ಎಂದು ಕೇಳಿದರೆ ಜನ ಹೇಳುತ್ತಾರೆ, “ಈ ಮೊಸಳೆಗಳ ಮೈಯಲ್ಲಿ ನಮ್ಮ ಹಿರಿಯರ ಆತ್ಮಗಳು ಸೇರಿಕೊಂಡಿವೆ. ಇವು ನಮಗೆ ಪೂಜಾರ್ಹ ಪ್ರಾಣಿಗಳು’. ಅವರ ನಂಬಿಕೆ ನಿಜವಿರಲಿ, ಸುಳ್ಳಿರಲಿ, ಆ ನಂಬಿಕೆಯಿಂದ ಮೊಸಳೆ ಮತ್ತು ಮನುಷ್ಯರ ಮಧ್ಯೆ ಒಂದು ಸೌಹಾರ್ದ ವಾತಾವರಣ ಏರ್ಪಟ್ಟಿರುವುದು ಅಚ್ಚರಿಯ ಮತ್ತು ಖುಷಿಪಡುವ ಸಂಗತಿ.

ಮೊಸಳೆಗೆ ಚಿಕಿತ್ಸೆ ನೀಡುತ್ತಾರೆ
ಕ್ರೊಕೊಡೈಲಸ್‌ ಇನ್‌ಸ್ಟಸ್‌ ಪ್ರಭೇದದ ಮೊಸಳೆಗಳು ಈ ಕೊಳದಲ್ಲಿವೆ. ಜನರು ಇವುಗಳನ್ನು ಪ್ರೀತಿಸುತ್ತಾರೆ. ಅವುಗಳಿಗೆ ಹಾನಿಯಾಗದಂತೆ ಕಾಪಾಡುತ್ತಾರೆ. ಖಾಯಿಲೆ ಬಂದರೆ ಔಷಧ ಮಾಡುತ್ತಾರೆ. ಇವು ಮಳೆಯೊಂದಿಗೆ ಆಕಾಶದಿಂದ ಬಂದಿವೆ, ಈ ಮೊಸಳೆಗಳು ಅಳಿದರೆ ಮಳೆಯೇ ಬರುವುದಿಲ್ಲವೆಂದು ನಂಬಿದ್ದಾರೆ. ವರ್ಷಕ್ಕೆ ಹತ್ತು ಸಾವಿರಕ್ಕಿಂತ ಹೆಚ್ಚು ಪ್ರವಾಸಿಗಳು ಇವುಗಳನ್ನು ನೋಡಲೆಂದೇ ದೇಶವಿದೇಶಗಳಿಂದ ಬರುತ್ತಾರೆ. ಆದರೆ ಈಗ ದಂಗೆಕೋರರ ಧಾಳಿಯಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿದಿದೆ. ಪ್ರವಾಸೋದ್ಯಮವೇ ಈ ಪ್ರದೇಶದ ಪ್ರಮುಖ ಆಕರ್ಷಣೆ. ಇಲ್ಲಿ ಪ್ರವಾಸಿಗರು ಮೊಸಳೆಗೆ ಆಹಾರವನ್ನೂ ತಿನ್ನಿಸಬಹುದು. ಅಂದ ಹಾಗೆ ಇಲ್ಲಿನ ಮೊಸಳೆಗಳ ಅಚ್ಚುಮೆಚ್ಚಿನ ಆಹಾರ ಚಿಕನ್‌. ಪ್ರವಾಸಿಗರು ಕೊಳದ ಬಳಿ ಮಾರುವ ಚಿಕನ್‌ಅನ್ನು ಕೋಲಿಗೆ ಕಟ್ಟಿ ಮೊಸಳೆಗೆ ತಿನ್ನಿಸಿ ಸಂತಸ ಪಡುತ್ತಾರೆ.

Advertisement

ಹಿರಿಯ ಮೊಸಳೆ
ಇಲ್ಲಿರುವ ಮೊಸಳೆಗಳಲ್ಲಿ 80 ವರ್ಷ ದಾಟಿದವೂ ಇವೆಯಂತೆ. ಮೊಸಳೆಯನ್ನು ಈ ಪರಿಯಾಗಿ ಗೌರವಿಸುವ ಹಳ್ಳಿಗರು ಪ್ರತಿ ವರ್ಷ ಮೊಸಳೆ ಹಬ್ಬವನ್ನೂ ಆಚರಿಸಿ ಸಂಭ್ರಮಿಸುತ್ತಾರೆ. ಕುಮ್‌ ಉಕ್ರೆ ಎಂಬ ಹೆಸರಿನ ಈ ಮೊಸಳೆ ಹಬ್ಬದ ದಿನ ಮೊಸಳೆಗಳನ್ನು ಪೂಜಿಸಿ, ಉತ್ತಮ ಮಳೆ, ಬೆಳೆ, ಆರೋಗ್ಯ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. 

ಪ. ರಾಮಕೃಷ್ಣ ಶಾಸ್ತ್ರಿ
 

Advertisement

Udayavani is now on Telegram. Click here to join our channel and stay updated with the latest news.

Next