Advertisement

ಬರ್ತ್‌ಡೇಗೆ ಕರೆಸಿ ಪ್ರೇಯಸಿ ಕತ್ತು ಕತ್ತರಿಸಿದ

01:08 PM Apr 16, 2023 | Team Udayavani |

ಬೆಂಗಳೂರು: ಹುಟ್ಟುಹಬ್ಬದ ಆಚರಣೆಗೆಂದು ಪ್ರೇಯಸಿ ಕರೆದು ಕೇಕ್‌ ಕತ್ತರಿಸುತ್ತಿದ್ದಂತೆ ಆಕೆಯ ಕತ್ತು ಕತ್ತರಿಸಿ ಹತ್ಯೆಗೈದ ಪ್ರಿಯಕನೊಬ್ಬ ಕೊನೆಗೆ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

Advertisement

ಕೋರಮಂಗಲ ನಿವಾಸಿ ನವ್ಯಾ(25) ಹತ್ಯೆಯಾದವರು. ಆಕೆಯ ಪ್ರಿಯಕರ ಹಾಗೂ ದೂರದ ಸಂಬಂಧಿ ಪ್ರಶಾಂತ್‌ ಪೊಲೀಸರಿಗೆ ಶರಣಾಗಿದ್ದಾನೆ.

ಕನಕಪುರ ಮೂಲದ ನವ್ಯಾ ಮತ್ತು ಪ್ರಶಾಂತ್‌ ದೂರದ ಸಂಬಂಧಿಯಾಗಿದ್ದಾರೆ. ನವ್ಯಾ ತಂದೆ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಉದ್ಯೋಗವನ್ನು ಕೊನೆ ಮಗಳು ನವ್ಯಾಗೆ ನೀಡಲಾಗಿತ್ತು. ಒಂದೂವರೆ ವರ್ಷಗಳಿಂದ ಆಂತರಿಕಾ ಭದ್ರತಾ ವಿಭಾಗದಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದರು. ಪ್ರಶಾಂತ್‌ ಲಗ್ಗೆರೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದು, ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದು, ನವ್ಯಾ ಮತ್ತು ಪ್ರಶಾಂತ್‌ ಆರೇಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ವರಸೆಯಲ್ಲಿ ಅಣ್ಣ-ತಂಗಿ: ಪ್ರಶಾಂತ್‌ ಮತ್ತು ನವ್ಯಾ ವಿಚಾರ ಮನೆಯವರಿಗೆ ಗೊತ್ತಾಗಿ, ಪರಿಶೀಲಿಸಿದಾಗ ಇಬ್ಬರು ವರಸೆಯಲ್ಲಿ ಅಣ್ಣ-ತಂಗಿ ಆಗುತ್ತಾರೆ ಎಂಬುದು ಗೊತ್ತಾಗಿದೆ. ಹೀಗಾಗಿ 2-3 ವರ್ಷಗಳ ಹಿಂದೆ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಹೀಗಾಗಿ ಇಬ್ಬರು ದೂರವಾಗಿದ್ದರು. ಆದರೆ, ಪ್ರಶಾಂತ್‌, ನವ್ಯಾಳ ಫೋಟೋವನ್ನು ಎದೆ ಮೇಲೆ ಹಚ್ಚೆ ಹಾಕಿಕೊಂಡಿದ್ದು, ಆಗಾಗ್ಗಿ ಕರೆ ಮಾಡಿ ಗಂಟೆಗಟ್ಟಲೇ ಮಾತನಾಡುತ್ತಿದ್ದ. ಮತ್ತೂಂದೆಡೆ ಆಕೆಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಗೆ ಇನ್ನಷ್ಟು ಹತ್ತಿರವಾಗಲೂ ಮುಂದಾಗಿದ್ದಾನೆ. ಆದರೆ, ಆಕೆ ಹಿರಿಯರ ಸೂಚನೆ ಮೇರೆಗೆ ಅಂತರ ಕಾಯ್ದುಕೊಂಡಿದ್ದಳು ಎಂಬುದು ಗೊತ್ತಾಗಿದೆ.

ಸಹೋದ್ಯೋಗಿ ಜತೆ ಚಾಟಿಂಗ್‌: ಇದೇ ವೇಳೆ ನವ್ಯಾ ತನ್ನ ಸಹೋದ್ಯೋಗಿ ಯುವಕನೊಬ್ಬನ ಜತೆ ಆತ್ಮೀಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆತನೊಂದಿಗೆ ಹೆಚ್ಚು ಚಾಟಿಂಗ್‌ ಮಾಡುತ್ತಿದ್ದಳು. ಕಚೇರಿ ವೇಳೆಯಲ್ಲೂ ಆತ್ಮೀಯವಾಗಿರುತ್ತಿದ್ದರು. ಈ ವಿಚಾರ ತಿಳಿದ ಪೋಷಕರು ಅನ್ಯ ಜಾತಿಯಾದ್ದರಿಂದ ಮದುವೆಗೆ ನಿರಾಕರಿಸಿದ್ದರು. ಆಗಲೂ ನವ್ಯಾಗೆ ಮನೆಯವರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಕೆಲ ದಿನಗಳಿಂದ ಸಹೋದ್ಯೋಗಿ ಸ್ನೇಹಿತನಿಂದಲೂ ಅಂತರ ಕಾಯ್ದುಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಹುಟ್ಟುಹಬ್ಬಕ್ಕೆ ಕರೆದು, ಹತ್ಯೆ: ಏ.18ರಂದು ನವ್ಯಾಳ ಹುಟ್ಟುಹಬ್ಬ ಇತ್ತು. ಪ್ರಶಾಂತ್‌ ಕರೆ ಮಾಡಿ, ಏ.18ರಂದು ತನ್ನೊಂದಿಗೆ ಹುಟ್ಟುಹಬ್ಬ ಆಚರಿಸಬೇಕೆಂದು ಬೇಡಿಕೆ ಇಟ್ಟಿದ್ದ. ಆದರೆ, ನವ್ಯಾ ಅಂದು ಬಿಡುವಿಲ್ಲ ಎಂದಿದ್ದಳು. ಹೀಗಾಗಿ ನಾಲ್ಕು ದಿನ ಮುಂಗಡವಾಗಿಯೇ ಹುಟ್ಟುಹಬ್ಬ ಆಚರಣೆ ಮಾಡೋಣ ಎಂದು ಲಗ್ಗೆರೆಯಲ್ಲಿರುವ ತನ್ನ ರೂಮ್‌ಗೆ ಆಹ್ವಾನಿಸಿದ್ದಾನೆ. ಏ.14ರಂದು ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಆಕೆ ಮಧ್ಯಾಹ್ನವೇ ಆತನ ರೂಮ್‌ಗೆ ಹೋಗಿದ್ದಾಳೆ. ಬಳಿಕ ತಾನೇ ತಂದಿದ್ದ ಕೇಕ್‌ ಕತ್ತರಿಸುವಂತೆ ಹೇಳಿದ ಪ್ರಶಾಂತ್‌, ಆಕೆ ಕೇಕ್‌ ಕತ್ತರಿಸುವ ಫೋಟೋಗಳನ್ನು ತೆಗೆದು, ಪರಸ್ಪರ ತಿನ್ನಿಸಿದ್ದಾರೆ. ಈ ಮಧ್ಯೆ ಸಹೋದ್ಯೋಗಿ ಸ್ನೇಹಿತನ ವಾಟ್ಸ್ ಆ್ಯಪ್‌ ಸಂದೇಶ ಬಂದಿದ್ದು, ಅದಕ್ಕೆ ಆಕೆ ಪ್ರತಿಕ್ರಿಯೆ ನೀಡಿದ್ದಾಳೆ. ಅದರಿಂದ ಆಕ್ರೋಶಗೊಂಡ ಆರೋಪಿ, ನವ್ಯಾ ಜತೆ ವಾಗ್ವಾದ ನಡೆಸಿದ್ದಾನೆ. ಕೊನೆಗೆ ತರಕಾರಿ ಹಚ್ಚುವ ಚಾಕುವಿನಿಂದ ಆಕೆಯ ಕುತ್ತಿಗೆ ಭಾಗದಲ್ಲಿ ಐದಾರು ಬಾರಿ ಇರಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.

ಐದಾರು ಗಂಟೆ ಮೃತದೇಹದ ಬಳಿಯಿದ್ದ! : ಸಂಜೆ ನಾಲ್ಕು ಗಂಟೆ ಸುಮಾರಿಗೆ ಪ್ರೇಯಸಿಯನ್ನು ಹತ್ಯೆಗೈದ ಪ್ರಶಾಂತ್‌ ರಾತ್ರಿ 10 ಗಂಟೆವರೆಗೂ ಮೃತದೇಹದ ಬಳಿಯೇ ಇದ್ದ. ಈ ಮಧ್ಯೆ ತನ್ನ ಮನೆಯವರಿಗೆ, ಸ್ನೇಹಿತರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಲು ಯತ್ನಿಸಿದ್ದಾನೆ. ಆದರೆ, ಯಾರು ಕರೆ ಸ್ವೀಕರಿಸಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಸುಮಾರಿಗೆ ರಾಜಗೋಪಾಲನಗರ ಠಾಣೆಗೆ ಚಾಕು ಸಮೇತ ಹಾಜರಾಗಿ ಹತ್ಯೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆರಂಭದಲ್ಲಿ ಆಕೆಯ ಡಿಜಿಪಿ ಕಚೇರಿಯ ಉದ್ಯೋಗಿ ಎಂದಿದ್ದ. ಆದರೆ, ಆತನ ಮೊಬೈಲ್‌ನಲ್ಲಿದ್ದ ಫೋಟೋದಿಂದ ಆಕೆ ಐಎಸ್‌ಡಿಯಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಬಳಿಕ ಘಟನಾ ಸ್ಥಳಕ್ಕೆ ಹೋದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ಪೊಲೀಸರು ಹೇಳಿದರು. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next