Advertisement

Crime: ಪತ್ನಿಗೆ ಬೇರೆ ವಿವಾಹ ಮಾಡಿಸಿದ್ದಕ್ಕೆ ಸ್ನೇಹಿತನ ಕೊಲೆ

11:43 AM Nov 14, 2023 | Team Udayavani |

ಬೆಂಗಳೂರು: ಪತ್ನಿಗೆ ಬೇರೊಬ್ಬನ ಜತೆ ಮದುವೆ ಮಾಡಿಸಿದ್ದಕ್ಕೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದು, ಬಳಿಕ ಬೆಂಕಿ ಹಚ್ಚಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕುಂಬಾರಪೇಟೆ ನಿವಾಸಿ ವಿಜಯಕುಮಾರ್‌(33) ಬಂಧಿತ.

ಆರೋಪಿ ನ.11ರಂದು ತರಕಾರಿ ಮಾರುಕಟ್ಟೆ ಆವರಣದಲ್ಲಿ ಕೊಠಡಿಯಲ್ಲಿ ಸ್ನೇಹಿತ ಸುಧಾಹರನ್‌ ಅಲಿಯಾಸ್‌ ಕುಳ್ಳ (29) ಎಂಬಾತನನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು, ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಆರೋಪಿ ವಿಜಯ್‌ಕುಮಾರ್‌ ಮತ್ತು ಕೊಲೆ ಆದ ಸುಧಾಹರನ್‌ ಸ್ನೇಹಿತರು. ದೂರದ ಸಂಬಂಧಿಗಳೂ ಆಗಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. 2014ರಲ್ಲಿ ವಿಜಯ ಕುಮಾರ್‌ ನಂದಿನಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ನಿತ್ಯ ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದ. ಹೀಗಾಗಿ ಆತನ ತಾಯಿ ಚಂದ್ರಾಲೇಔಟ್‌ನಲ್ಲಿರುವ ಮದ್ಯ ವರ್ಜನ ಕೇಂದ್ರಕ್ಕೆ ಸೇರಿಸಿದ್ದರು. ಅದರಿಂದ 11 ತಿಂಗಳ ಕಾಲ ವಿಜಯಕುಮಾರ್‌ ಆ ಕೇಂದ್ರದಲ್ಲೇ ಇದ್ದ. ಆ ಬಳಿಕವೂ ವಿಜಯ್‌ಕುಮಾರ್‌ ಸರಿ ಹೋಗಿರಲಿಲ್ಲ. ಅದರಿಂದ ಬೇಸರಗೊಂಡ ನಂದಿನಿ, ಪತಿ ಬಿಟ್ಟು ಪ್ರತ್ಯೇಕವಾಗಿದ್ದರು.

ಬೇರೆಯವನ ಜೊತೆ ಮದುವೆ: ಈ ವಿಚಾರ ತಿಳಿದ ಸುಧಾಹರನ್‌, ವಿಜಯಕುಮಾರ್‌ ಪತ್ನಿ ನಂದಿನಿಗೆ ಆನಂದ್‌ ಎಂಬಾತನ ಜತೆ ಮದುವೆ ಮಾಡಿಸಿದ್ದ. ಆ ಬಳಿಕ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿಜಯ್‌ ಕುಮಾರ್‌, ಸುಧಾಹರನ್‌ಗೆ ಪತ್ನಿ ನಂದಿನಿ ಮತ್ತು ಆಕೆಯ ಪತಿ ಆನಂದ್‌ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದ. ಆದರೆ, ಹೇಳಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಸುಧಾಹರನ್‌ ಮೊಬೈಲ್‌ನಿಂದ ಆನಂದ್‌ಗೆ ಆರೋಪಿ ವಿಜಯಕುಮಾರ್‌ ಕರೆ ಮಾಡಿದ್ದಾನೆ. ಆದರೆ. ಆನಂದ್‌ ಕರೆ ಸ್ವೀಕರಿಸಿರಲಿಲ್ಲ ಎಂಬುದು ಗೊತ್ತಾಗಿದೆ.

Advertisement

ಮೋಸ ಮಾಡಿದ್ದೀಯ ಎಂದು ಜಗಳ: ಮತ್ತೂಂದೆಡೆ ನಂದಿನಿ ಮತ್ತು ಆನಂದ್‌ ಬಗ್ಗೆ ವಿಚಾರಿಸಿದಕ್ಕೆ ಮಾರುಕಟ್ಟೆಯಲ್ಲಿ ಸುಧಾಹರನ್‌ ಸ್ನೇಹಿತ ಮಣಿ ಎಂಬಾತ ಆರೋಪಿ ವಿಜಯ್‌ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದ ಆರೋಪಿ, ಕೆಲ ದಿನ ವಿಶ್ರಾಂತಿ ಪಡೆದು ಮತ್ತೆ ಕೆಲಸಕ್ಕೆ ಬಂದಿದ್ದ. ಈ ವೇಳೆ ಸುಧಾಹರನ್‌ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಆರೋಪಿ, ಸಂಬಂಧಿ ಹಾಗೂ ಸ್ನೇಹಿತನಾಗಿ ಮೋಸ ಮಾಡಿರುವೆ ಎಂದು ಆಗಾಗ್ಗೆ ಜಗಳ ತೆಗೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನ.11ರಂದು ಬೆಳಗ್ಗೆ ಮಾರುಕಟ್ಟೆಯಲ್ಲಿ ಸುಧಾಹರನ್‌ನನ್ನು ಕಂಡ ಆರೋಪಿ, ತನ್ನ ಬಳಿಯಿದ್ದ ಮದ್ಯ ಕೊಟ್ಟಿದ್ದಾನೆ. ಬಳಿಕ ಇಬ್ಬರು ಕುಂಬಾರಪೇಟೆ ಬಳಿ ಬಾಟೂಟ ಮಾಡಿ, ಬಳಿಕ ಮಾರುಕಟ್ಟೆಗೆ ಬಂದಿದ್ದಾರೆ. ಅಲ್ಲಿ ಮತ್ತೂಮ್ಮೆ ಸುಧಾಹರನ್‌ಗೆ ಮದ್ಯ ಕೊಡಿಸಿದ್ದಾನೆ. ಬಳಿಕ ಅಪರಾಹ್ನ 12 ಗಂಟೆಗೆ ವಿಶ್ರಾಂತಿ ಪಡೆಯಲು ಕಲಾಸಿಪಾಳ್ಯ ಮಾರುಕಟ್ಟೆಯ ಕೊಠಡಿಯೊಂದಕ್ಕೆ ಸುಧಾಹರನ್‌ ಹೋಗಿದ್ದಾರೆ. ಕೆಲ ಹೊತ್ತಿನ ಬಳಿಕ ನಿದ್ದೆಯಲ್ಲಿದ್ದ ಸುಧಾಹರನ್‌ ಎಬ್ಬಿಸಿದ ಆರೋಪಿ, ತನ್ನ ಬಳಿಯಿದ್ದ 150 ರೂ. ತೆಗೆದುಕೊಂಡಿರುವೆ ಎಂದು ಜಗಳ ಆರಂಭಿಸಿದ್ದಾನೆ. ಅದರಿಂದ ಕೋಪಗೊಂಡ ಸುಧಾಹರನ್‌, ಆರೋಪಿಗೆ ಕಾಪಾಳಮೋಕ್ಷ ಮಾಡಿದ್ದ.

ಅದರಿಂದ ಇನ್ನಷ್ಟು ಕ್ರೋದಗೊಂಡ ಆರೋಪಿ, ಇದೇ ಸರಿಯಾದ ಸಮಯ ಎಂದು ತನ್ನ ಬಳಿಯಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಸುಧಾಹರನ್‌ನ ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಬಳಿಕ ಗೋಣಿ ಚೀಲಗಳು, ಪೇಪರ್‌ಗಳು, ಪ್ಲಾಸ್ಟಿಕ್‌ ಗಳನ್ನು ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಆ ಬಳಿಕ ದಟ್ಟವಾದ ಹೊಗೆ ಕಂಡು ಮಾರುಕಟ್ಟೆಯ ಕಾರ್ಯದರ್ಶಿಯೊಬ್ಬರು ದೂರು ನೀಡಿದ್ದರು. ಬಳಿಕ ಸ್ಥಳ ಪರಿಶೀಲಿಸಿದಾಗ ಕೊಲೆಯಾಗಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next