Advertisement

ಬಟ್ಟೆ ಅಂಗಡಿಯಲ್ಲಿ ಮಾರಾಟಕ್ಕಿದೆ ಶಿಕ್ಷಣ: ನಕಲಿ ಅಂಕಪಟ್ಟಿಗಳನ್ನು ಲಕ್ಷಾಂತರ ರೂ.ಗೆ ಮಾರಾಟ!

07:11 PM Jul 10, 2020 | keerthan |

ಕಲಬುರಗಿ: ಅಂತರ್ಜಾಲದಲ್ಲಿ ವಿಶ್ವವಿದ್ಯಾಲಯಗಳ ಲೋಗೋಗಳು ತೆಗೆದುಕೊಂಡು ಅವುಗಳನ್ನೇ‌ ಬಳಸಿ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಲಕ್ಷಾಂತರ ರೂ. ಹಣಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕಲಬುರಗಿ ನಗರ ಪೊಲೀಸರು ಪತ್ತೆ ಹಚ್ಚಿಸಿದ್ದಾರೆ.

Advertisement

ನಗರದ ಏಷಿಯನ್ ಮಾಲ್‌ನ ಮೊದಲ ಮಹಡಿಯಲ್ಲಿರುವ ‘ಐ4ಯು’ ಗ್ಲಾಮ್ ಚಾಯ್ಸ್ ಬಟ್ಟೆ ಅಂಗಡಿಯ ಬಟ್ಟೆ ವ್ಯಾಪಾರಿ ಇಂತಹ ಖತರ್ನಾಕ್ ದಂಧೆಯಲ್ಲಿ ತೊಡಗಿದ್ದ ಎಂಬುದೂ ಬಯಲಿಗೆ ಬಂದಿದೆ. ಇಲ್ಲಿನ ತಾರ್ ಫೈಲ್ ಬಡಾವಣೆಯ ಗೌಸ್ ನಗರದ ನಿವಾಸಿ ಮಹಮ್ಮದ್ ಖಾನ್ ಎಂಬಾತ ಈಗ ಪೊಲೀಸ್ ಅತಿಥಿಯಾಗಿದ್ದಾನೆ.

ಬಟ್ಟೆ ಅಂಗಡಿಯಲ್ಲಿ ಅಂಕಪಟ್ಟಿಗಳ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಉಪ ಅಯುಕ್ತ ಡಿ.ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಠಾಣೆಯ ಇನ್ಸ್ ಪೆಕ್ಟರ್ ಎಲ್.ಎಚ್ ಗೌಂಡಿ ನೇತೃತ್ವದಲ್ಲಿ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿ, ಖದೀಮನನ್ನು ಬಂಧಿಸಿದ್ದಾರೆ.

ಯಾವುದೇ ಶಿಕ್ಷಣ ಸಂಸ್ಥೆಯೂ ಹೊಂದಿರದ ಆರೋಪಿ ಮಹ್ಮದ್, ಎಸ್ಎಸ್ಎಲ್ ಸಿಯಿಂದ ಹಿಡಿದು ಬಿಇ., ಬಿ.ಟೆಕ್, ಎಂ.ಟೆಕ್.ವರೆಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದ್ದ. ಯಾರೇ ಕೇಳಿದರೂ ಕೇವಲ 30-40 ದಿನದಲ್ಲೇ ಅಂಕಪಟ್ಟಿಗಳನ್ನು ನೀಡುತ್ತಿದ್ದ. ಒಂದೊಂದು ಹಂತದ ಪದವಿ ಮಾರ್ಕ್ಸ್ ಕಾರ್ಡ್ ಗಳಿಗೆ ಇಂತಿಷ್ಟು ಎಂದು ಹಣ ನಿಗದಿ ಮಾಡಿದ್ದ. ತನ್ನ ಈ ಕೃತ್ಯಕ್ಕೆ ದೊಡ್ಡ-ದೊಡ್ಡ ವಿಶ್ವವಿದ್ಯಾಲಯಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ.

ಯಾವ ಅಂಕಪಟ್ಟಿಗೆ ಎಷ್ಟು ಹಣ?: ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿ.ಟೆಕ್, ಎಬಿಎ, ಎಂಸಿಎ., ಎಂ.ಟೆಕ್. ಪದವಿ ಪ್ರಮಾಣ ಪತ್ರಗಳನ್ನು ಬಟ್ಟೆ ಅಂಗಡಿಯಲ್ಲೇ ಈ ಖದೀಮ ಸೃಷ್ಟಿಸುತ್ತಿದ್ದ. ಬಿ.ಇ. ಬಿ.ಟೆಕ್ ಪದವಿ ಅಂಕಪಟ್ಟಿಗಳಿಗೆ 3 ಲಕ್ಷ ದಿಂದ 3.5 ಲಕ್ಷ ರೂ., ಎಂಬಿಎ ಪದವಿಗೆಗೆ 1.5 ಲಕ್ಷ ರೂ., ಎಂಸಿಎ ಪದವಿಗೆ 90 ಸಾವಿರ ರೂ., ಬಿಕಾಂ, ಬಿಎಸ್ಸಿ ಪದವಿ ಅಂಕಪಟ್ಟಿಗಳಿಗೆ 50ರಿಂದ 60‌ ಸಾವಿರ ರೂ., ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಮತ್ತಿತರ ಅಂಕಪಟ್ಟಿಗಳಿಗೆ 30ರಿಂದ 40 ಸಾವಿರ ರೂ. ದರ ನಿಗದಿ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ತಿಳಿಸಿದ್ದಾರೆ.

Advertisement

ಅಲ್ಲದೇ, ವಿದೇಶದಲ್ಲಿ ಕೆಲಸ ಮಾಡಲು ಅಟೇಸ್ಟೇಷನ್ ಸಹ ಮಾಡಿಸಿ ಕೊಡುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸೇಂಟ್ ಅಲೋಶಿಯಸ್ ಅಂತಾರಾಷ್ಟ್ರೀಯ ವಿವಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಸಾಂಗೈ ಅಂತಾರಾಷ್ಟ್ರೀಯ ವಿವಿ, ಹಿಮಾಲಯನ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಹಿರಂಗ ‌ಪಡಿಸಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಬಂಧಿತನಿಂದ 2.20 ಲಕ್ಷ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಆತನ ಅಂಗಡಿಯ ಕೋಣೆಯಲ್ಲಿ ಒಂದು ಹಾರ್ಡ್ ಡಿಸ್ಕ್, ಅನೇಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಕಲು ಅಂಕಪಟ್ಟಿಗಳು ಹಾಗೂ ಎಲೆ ಜೆನ್ಸ್ ಟೆಕ್ನಾಲಜಿ ಫೆಸ್‌ಮೆಂಟ್ ಬ್ಯುರೊ ಎಂಬ ಹೆಸರಿನ ಬಿಲ್‌ಬುಕ್ ಮತ್ತು ಲೆಟರ್‌ಪ್ಯಾಡ್‌ಗಳ ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ವಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next