ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವಾಗ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ ಮಹಾರಾಷ್ಟ್ರ ಮೂಲದ ಪ್ರಯಾಣಿಕನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರ ಮೂಲದ ಸ್ವಪ್ನಿಲ್ ಹೋಲೆ(32) ಬಂಧಿತ.
ಆರೋಪಿಯ ವಿರುದ್ಧ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಅನು ಪಿ.ಟಾಮ್ ಎಂಬವರು ಪ್ರಕರಣ ದಾಖಲಿಸಿದ್ದರು. ಆರೋಪಿ ಸ್ವಪ್ನಿಲ್ ಹೋಲೆ, ಸೆ.30ರಂದು ರಾತ್ರಿ 11 ಗಂಟೆಗೆ ನಾಗಪುರ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್ಗೆ ತೆರಳು ಇಂಡಿಗೋ ಏರ್ಲೈನ್ಸ್ ವಿಮಾನ ಹತ್ತಿದ್ದಾನೆ. ಈ ವಿಮಾನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಬಳಿಕ ಬ್ಯಾಂಕಾಕ್ಗೆ ತೆರಳುತ್ತದೆ. ನಾಗಪುರದಿಂದ ವಿಮಾನ ಬೆಂಗಳೂರಿನತ್ತ ಬರುವಾಗ ಐದನೇ ಆಸನದಲ್ಲಿ ಕುಳಿತಿದ್ದ ಆರೋಪಿ, ಏಕಾಏಕಿ ಪಕ್ಕದಲ್ಲಿದ್ದ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ್ದಾನೆ. ಈ ವೇಳೆ ವಿಮಾನ ಸಿಬ್ಬಂದಿ ಗಮನಿಸಿ ತಡೆದಿದ್ದಾರೆ.
ಆ ನಂತರ ವಿಮಾನ ಬೆಂಗಳೂರು ಏರ್ಪೋರ್ಟ್ಗೆ ಬರುತ್ತಿದ್ದಂತೆ ಏರ್ಲೈನ್ಸ್ ಸಿಬ್ಬಂದಿ ಅನು ಪಿ.ಟಾಮ್ ಪ್ರಯಾಣಿಕನ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.