ಬೆಂಗಳೂರು: ಕದಿರೇಶ್ ಹತ್ಯೆಯ ಹಿಂದೆ ಚಾಮರಾಜಪೇಟೆಯ ಶಾಸಕ ಜಮೀರ್ ಅವರ ಕೈವಾಡದ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಬಿಬಿಎಂಪಿ ಬಿಜೆಪಿ ಸದಸ್ಯೆಯ ಪತಿ, ಪಕ್ಷದ ಕಾರ್ಯಕರ್ತ ಕದಿರೇಶ್ ಹತ್ಯೆ ಖಂಡಿಸಿ ಮಂಗಳವಾರ ಗೂಡ್‌ಶೆಡ್ ರಸ್ತೆಯ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆರೆಸ್ಸೆಸ್, ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ದೂರಿದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯ ಹಿಂದೆ ಸಚಿವ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಡಿವೈಎಸ್‌ಪಿ ಗಣಪತಿ ಹತ್ಯೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾತ್ರ ಇರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಈ ಯಾವುದೇ ವಿಷಯಗಳನ್ನು ಪ್ರಸ್ತಾವ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯಾದಾಗ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇದು ಹತ್ಯೆ ಉದ್ದೇಶದಿಂದ ನಡೆದ ಕೃತ್ಯವಲ್ಲ. ಸೂðಡ್ರೈವರ್‌ನಿಂದ ಚುಚ್ಚಲಾಗಿತ್ತು ಎಂದು ಹಗುರವಾಗಿ ಮಾತನಾಡಿದ್ದರು. ಆದರೆ ಪೊಲೀಸ್ ತನಿಖೆಯಿಂದ ಚಾಕುವಿನಿಂದ ಇರಿದು ಸಂತೋಷ್ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು. ಇದೇ ರೀತಿ ಕದಿರೇಶ್ ಹತ್ಯೆಯನ್ನೂ ಮುಚ್ಚಿಹಾಕುವ ಪ್ರಯತ್ನ ನಡೆದಿದ್ದು, ಪ್ರಕರಣದಲ್ಲಿ ಶಾಸಕರ ಕೈವಾಡದ ಶಂಕೆಯಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಸದ ಪಿ.ಸಿ.ಮೋಹನ್, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯಬಿಜೆಪಿ ಸಹ-ವಕ್ತಾರ ಅನ್ವರ್ ಮಾಣಿಪ್ಪಾಡಿ, ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ವಿ.ಗಣೇಶ್, ಶಿವಕುಮಾರ್, ವಾಸುದೇವ್ ಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು