ಮೆಮಾರಿ: ಒಳನುಸುಳುಕೋರರ (ಮುಸ್ಲಿಮರು) ಮತ ಬ್ಯಾಂಕ್‌ಗೆ ಹೆದರಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಮ ಮಂದಿರ ಉದ್ಘಾಟನೆಗೆ ಬರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಆರೋಪಿಸಿದರು.
ಪೂರ್ವ ಬರ್ಧಮಾನ್ ಜಿಲ್ಲೆಯ ಮೆಮಾರಿಯಲ್ಲಿ ಆಯೋಜಿಸಲಾಗಿದ್ದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ಲೋಕಸಭೆ ಚುನಾವಣೆಯು ಪರಿವಾರ್ ರಾಜ್ ಅಥವಾ ರಾಮ ರಾಜ್ಯ ನಡುವಿನ ಆಯ್ಕೆಯಾಗಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ದೇಶದ ಜನರು ದಶಕಗಳಿಂದ ಕಾಯುತ್ತಿದ್ದರು. ಆದರೆ ಕಾಂಗ್ರೆಸ್, ಟಿಎಂಸಿ ಮತ್ತು ಎಡಪಕ್ಷಗಳಿಗೆ ದೇಗುಲ ನಿರ್ಮಾಣ ಬೇಕಿರಲಿಲ್ಲ. ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಆಹ್ವಾನ ನೀಡಿದರೂ ರಾಮ ಮಂದಿರ ಉದ್ಘಾಟನೆಗೆ ಹಾಜರಾಗಲಿಲ್ಲ. ಕಾರ್ಯಕ್ರಮಕ್ಕೆ ತೆರಳಿದರೆ ಟಿಎಂಸಿಯ ವೋಟ್ ಬ್ಯಾಂಕ್ ಆಗಿರುವ ನುಸುಳುಕೋರರು ಮುನಿದುಕೊಳ್ಳುತ್ತಾರೆಂದು ಭಾವಿಸಿರಬೇಕು ಎಂದು ಆರೋಪಿಸಿದರು.
ಮಮತಾ ಮತ್ತು ಅಭಿಷೇಕ್ ಬಿಜೆಪಿ ಕಾರ್ಯಕರ್ತರಿಗೆ ಹೆದರಿದ್ದಾರೆ. ಹಾಗಾಗಿ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿದ ಅಮಿತ್ ಶಾ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆಯೂ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆಂದು ಆರೋಪಿಸಿದರು. ನುಸುಳುಕೋರರನ್ನು ಬೆಂಬಲಿಸುತ್ತಿರುವ ಮಮತಾ ಹಿಂದೂ ನಿರಾಶ್ರಿತರು ಪೌರತ್ವವನ್ನು ಪಡೆದುಕೊಳ್ಳುವುದನ್ನು ದೀದಿ ವಿರೋಧಿಸುತ್ತಿದ್ದಾರೆಂದು ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ಪ್ರಚಾರಕ್ಕೆ ಮುನ್ನ ಗುವಾಹಾಟಿಯಲ್ಲಿ ಮಾತನಾಡಿದ ಅಮಿತ್ ಶಾ ಬಿಜೆಪಿ ಮತದಾರರನ್ನು ಅಲ್ಪಸಂಖ್ಯಾಕರು, ಬಹುಸಂಖ್ಯಾಕರು ಎಂದು ವರ್ಗೀಕರಿಸುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ನಿಲುವು ಎಂದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲು, ಸಂವಿಧಾನ ರದ್ದು ಮಾಡುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತದೆ ಎಂದು ದೂರಿದರು.