ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲಾ 42 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ‘ಪ್ರಧಾನಿ ಮೋದಿ ಅತೃಪ್ತರಾಗುತ್ತಾರೆ ಎಂಬ ಭಯ ಮಮತಾ ಬ್ಯಾನರ್ಜಿ ಅವರಿಗೆ ಇದೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಆಕ್ರೋಶ ಹೊರ ಹಾಕಿದೆ.
ತೃಣಮೂಲ ಕಾಂಗ್ರೆಸ್ ತನ್ನ 42 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ ಪಶ್ಚಿಮ ಬಂಗಾಳದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಭಾನುವಾರ ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿ ಅವರು ಇಂಡಿ ಮೈತ್ರಿಕೂಟದಲ್ಲಿಯೇ ಮುಂದುವರಿದರೆ, ಅವರು ಪ್ರಧಾನಿ ಮೋದಿ ವಿರುದ್ಧ ಹೋಗಬೇಕಾಗುತ್ತದೆ, ಪದೇ ಪದೇ ಇಡಿ ಮತ್ತು ಸಿಬಿಐ ಕಳುಹಿಸುತ್ತಾರೆ ಎಂದು ಹೆದರಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ವಿರುದ್ಧ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಸಂದೇಶ ಕಳುಹಿಸಿ ದ್ದಾರೆ ಎಂದು ಚೌಧರಿ ಹೇಳಿದ್ದಾರೆ.
ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟಿಎಂಸಿ ಪಟ್ಟಿಯ ಬಗ್ಗೆ ಪ್ರತಿಕ್ರಿಯೆ ನೀಡಿ “ಏಕಪಕ್ಷೀಯ ಸ್ಥಾನಗಳ ಘೋಷಣೆ ಆಗಬಾರದಿತ್ತು. ಟಿಎಂಸಿ ಮೇಲೆ ಯಾವ ಒತ್ತಡವಿದೆ ಎಂದು ನನಗೆ ತಿಳಿದಿಲ್ಲ, ಆದರೆ ನಮಗೆ ಪ್ರಸ್ತುತ, ನಾವು ಪಶ್ಚಿಮ ಬಂಗಾಳದಲ್ಲಿ ಇಂಡಿ ಮೈತ್ರಿಕೂಟವನ್ನು ಬಲಪಡಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.