ಕೋಲ್ಕತ್ತಾ : ಮದರ್ ಥೆರೆಸಾ ಮಿಷನರಿಸ್ ಆಫ್ ಚಾರಿಟಿ ಇಂಡಿಯಾದ ಎಲ್ಲ ಬ್ಯಾಂಕ್ ಅಕೌಂಟ್ ಗಳನ್ನು ಕೇಂದ್ರ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದ ವಿವಾದಾತ್ಮಕ ಟ್ವೀಟ್ ಈಗ ಅವರಿಗೇ ತಿರುಗು ಬಾಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ವಕ್ತಾರ ಸುನಿತಾ ಕುಮಾರ್, “ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಎಲ್ಲ ಅಕೌಂಟ್ ಗಳು ಸುರಕ್ಷಿತವಾಗಿದೆ. ಬ್ಯಾಂಕ್ ವ್ಯವಹಾರಗಳನ್ನೂ ನಡೆಸಲಾಗುತ್ತಿದೆ. ಕೇಂದ್ರ ಸರಕಾರದಿಂದ ನಮಗೆ ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಈ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಮಾಹಿತಿ ಕೊರತೆ ಇದ್ದಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ “ಕ್ರಿಸ್ಮಸ್ ಸಂದರ್ಭದಲ್ಲಿ ಮದರ್ ಥೆರೆಸಾ ಮಿಷನರೀಸ್ ಆಫ್ ಚಾರಿಟಿ ಇಂಡಿಯಾದ ಎಲ್ಲ ಅಕೌಂಟ್ ಗಳನ್ನು ಕೇಂದ್ರ ಸರಕಾರ ಸೀಜ್ ಮಾಡಿರುವ ಮಾಹಿತಿ ಆಘಾತವನ್ನು ಸೃಷ್ಟಿಸಿದೆ. 22ಸಾವಿರ ರೋಗಿಗಳು, ಸಿಬ್ಬಂದಿ ಆಹಾರ ಹಾಗೂ ಔಷಧ ಪೂರೈಕೆಯಿಂದ ನರಳುವಂತಾಗಿದೆ. ಕಾನೂನು ಅನುಷ್ಠಾನದ ಸಂದರ್ಭದಲ್ಲಿ ಮಾನವೀಯ ಕಾರ್ಯಗಳನ್ನು ಕಡೆಗಣಿಸಬಾರದು ʼʼ ಎಂದು ಟ್ವೀಟ್ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಆದರೆ ಈಗ ಮಿಷನರಿಯೇ ಇದಕ್ಕೆ ಸ್ಪಷ್ಟನೆ ನೀಡಿದೆ. “ಎಲ್ಲವೂ ಸರಿಯಾಗಿದೆ. ಅವರು (ಮಮತಾ) ಬಹುಶಃ ಮಾಹಿತಿ ಕೊರತೆ ಹೊಂದಿರಬಹುದು ʼʼ ಎಂದು ನೀಡಿರುವ ಸ್ಪಷ್ಟನೆ ಮಮತಾ ಬ್ಯಾನರ್ಜಿ ಅವರಿಗೆ ತಿರುಗು ಬಾಣವಾಗಿದೆ.