Advertisement
ಒಂದು ಸರಳ ಕಥೆಯನ್ನು ಸಿಕ್ಕಾಪಟ್ಟೆ ಎಳೆದಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಮೊದಲರ್ಧ ಕೊಂಚ ಹಾಸ್ಯಮಯವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧದಲ್ಲೊಂದು ತಿರುವು ಪಡೆದುಕೊಂಡು ಬೇರೆ ದಿಕ್ಕಿಗೆ ಮುಖ ಮಾಡುತ್ತೆ. ಹಾಗೆ ನೋಡಿದರೆ, ಕೊನೆಯ ಬಾಲ್‌ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಲಾಗಿದೆಯಷ್ಟೇ. ಅದು ಬೌಂಡರಿ ಆಚೆಗೆ ಹೋಗುತ್ತಾ ಅನ್ನೋದೇ ಪ್ರಶ್ನಾರ್ಥಕ.
Related Articles
Advertisement
ಒಂದು ಸರಳ ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕೆಂಬ ಜಾಣ್ಮೆ ಇದೆ. ಹಾಗಾಗಿ, ಒಂದು ಕಚೇರಿ, ಎರಡ್ಮೂರು ಮನೆ, ಒಂದು ದೇವಸ್ಥಾನ, ಎರಡ್ಮೂರು ರಸ್ತೆಗಳನ್ನು ಹೊರತುಪಡಿಸಿದರೆ, ಬೇರೇನೂ ತೋರಿಸದೆ ಅಲ್ಲಲ್ಲೇ ಸುತ್ತಾಡಿಕೊಂಡು “ಮಾಮಾ’ನ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ. ಇಲ್ಲಿರುವ ಕಥೆ ಹೊಸದೇನಲ್ಲ. ಆದರೆ, ಹೇಳಿರುವ ಮತ್ತು ತೋರಿಸಿರುವ ರೀತಿಯಲ್ಲಿ ಜಾಣತನ ಮೆರೆದಿದ್ದಾರಷ್ಟೇ.
ಆದರೆ, ಅದನ್ನು ಹೇಳುವುದಕ್ಕೆ ಅಷ್ಟೊಂದು ಬಿಲ್ಡಪ್ ಬೇಕಿತ್ತಾ ಅನಿಸೋದು ಉಂಟು. ಇಲ್ಲಿ ಹಲವು ನಗುವ ಸನ್ನಿವೇಶಗಳಿವೆ. ಆದರೆ, ನಗು ಬರುತ್ತಾ ಎಂಬುದನ್ನು ಕೇಳುವಂತಿಲ್ಲ. ಹೆಚ್ಚು ಹಾಸ್ಯ ಮಾಡಲು ಹೋಗಿ ಅದು ಅಪಹಾಸ್ಯಕ್ಕೀಡಾದ ದೃಶ್ಯಗಳೇ ಕಾಣಸಿಗುತ್ತವೆ. ಕೆಲವೊಮ್ಮೆ “ಅತೀ’ ಎನಿಸುವ ದೃಶ್ಯಗಳೂ ಕಾಣಿಸಿಕೊಂಡು, ನೋಡುಗನ ತಾಳ್ಮೆ ಪರೀಕ್ಷಿಸಿವುದುಂಟು.
ಮನರಂಜನೆಯ ನೆಪದಲ್ಲಿ ಅತೀ “ರೇಖೆ’ಯನ್ನು ದಾಟಿದ್ದಾರೆ. ಆದರೆ, ಕೊನೆಯ ನಿಮಿಷಗಳಲ್ಲಿ ಕೊಡುವ ಮಹತ್ವದ ತಿರುವು ಅತೀರೇಖೆಗಳ ದಾಟುವಿಕೆಯನ್ನೆಲ್ಲಾ ಮರೆಸುತ್ತವೆ. ಅದೊಂದೇ ಚಿತ್ರದ ಹೈಲೆಟ್. ವಿಜಯ್ (ಮೋಹನ್) ಕಂಪೆನಿಯೊಂದರ ಬಾಸ್ ಬಳಿ ತಂಗಿ ಮದ್ವೆಗೆ ಲಕ್ಷಾಂತರ ಸಾಲ ಪಡೆದಿರುತ್ತಾನೆ. ಅದಕ್ಕಾಗಿ ತನ್ನ ಬಾಸ್ ಹೇಳಿದಂತೆ ಕೇಳಿಕೊಂಡು ಕೆಲಸ ಮಾಡುತ್ತಿರುತ್ತಾನೆ.
ಆ ಬಾಸ್‌ಗೆ, ಪ್ರತಿ ದಿನ ಒಂದೊಂದು ಹೊಸ ಹುಡುಗಿ ಜೊತೆ ದಿನ ಕಳೆಯುವ ಚಟ. ಆ ಹುಡುಗಿಯರನ್ನ ಪಿಕಪ್ ಅಂಡ್ ಡ್ರಾಪ್ ಮಾಡುವ ಕೆಲಸ ವಿಜಯ್‌ದು. ತಾನು ಮಾಡುವ ಕೆಲಸ ತಪ್ಪು ಅಂತ ಗೊತ್ತಿದ್ದರೂ, ವಿಧಿ ಇಲ್ಲದೆ ಮಾಡುತ್ತಿರುತ್ತಾನೆ. ಮಧ್ಯೆ ಒಂದು ಪೇಚಿಗೆ ಸಿಲುಕುವ ಸನ್ನಿವೇಶ ಬರುತ್ತೆ. ಆ ಸನ್ನಿವೇಶ ಎಂಥದ್ದು, ಆ ಬಾಸ್‌ಗೆ ಯಾಕೆ ಅಂಥದ್ದೊಂದು ಚಟ ಇರುತ್ತೆ ಎಂಬುದೇ ಸಸ್ಪೆನ್ಸ್.
ಅದನ್ನು ತಿಳಿಯುವ ಕುತೂಹಲವೇನಾದರೂ ಇದ್ದರೆ, “ಮಾಮ’ನನ್ನು ನೋಡಬಹುದು. ಮೋಹನ್ ನಿರ್ದೇಶಕ ಅಂತ ಒಪ್ಪಿಕೊಳ್ಳುವುದು ಕಷ್ಟ ಎನಿಸಿದರೆ, ನಟನಾಗಿ ಒಪ್ಪಲೇಬೇಕು. ಅವರ ಟೈಮಿಂಗ್ ಮತ್ತು ಹಾವ-ಭಾವಗಳಲ್ಲಿ ನಗೆಬುಗ್ಗೆ ಎಬ್ಬಿಸುವ ತಾಕತ್ತಿದೆ. ಕಟ್ಟಿಕೊಂಡ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅರವಿಂದ್‌ಗೆ ಇಲ್ಲೊಂದು ಜವಾಬ್ದಾರಿ ಪಾತ್ರ ಸಿಕ್ಕಿದೆ.
ಅದನ್ನು ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ಬರುವ ಸೌಜನ್ಯ, ಸಾಂಪ್ರತ, ಭೂಮಿಕಾ ಇತ್ಯಾದಿ ಹುಡುಗಿಯರೆಲ್ಲಾ ನಿರ್ದೇಶಕರ ಕಲ್ಪನೆಗೆ ಬಣ್ಣ ತುಂಬುವ ಪ್ರಯತ್ನ ಮಾಡಿದ್ದಾರೆ. ಧರಂ ದೀಪ್ ಸಂಗೀತ ಮಾಮಾನ ಸ್ವಾದ ಹೆಚ್ಚಿಸಿಲ್ಲ. ಪ್ರಸಾದ್ ಬಾಬು ಛಾಯಾಗ್ರಹಣ ಪರವಾಗಿಲ್ಲ. ಸಂಕಲನಕಾರ ಶಿವಪ್ರಸಾದ್ ವೇಗಮಿತಿ ಕಾಪಾಡಿಕೊಂಡಿದ್ದಾರೆ.
ಚಿತ್ರ: ಹಲೋ ಮಾಮನಿರ್ಮಾಣ: ಬಿ.ಕೆ.ಚಂದ್ರಶೇಖರ್
ನಿರ್ದೇಶನ: ಮೋಹನ್
ತಾರಾಗಣ: ಮೋಹನ್, ಅರವಿಂದ್, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ, ಕೆಂಪೇಗೌಡ ಮುಂತಾದವರು * ವಿಜಯ್ ಭರಮಸಾಗರ