Advertisement

ಮಲ್ಪೆ ಬಂದರು: ಸಮಸ್ಯೆಯ ಸರಮಾಲೆಯೊಂದಿಗೆ ಮುಗಿದ ಯಾಂತ್ರೀಕೃತ ಮೀನುಗಾರಿಕೆ

03:39 PM Jun 10, 2020 | mahesh |

ಮಲ್ಪೆ: ಯಾಂತ್ರೀಕೃತ ಮೀನುಗಾರಿಕೆಗೆ ಸರಕಾರ ಜೂ. 14ರ ವರೆಗೆ ಅವಕಾಶ ನೀಡಿದ್ದರೂ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಜೂ. 8 ರಂದು ಸಂಪೂರ್ಣ ಅಂತ್ಯಗೊಂಡಿದೆ. ಮೇ 31ರಂದು ದೋಣಿ ಕಡಲಿಗೆ ಹೋಗುವುದನ್ನು ನಿಲ್ಲಿಸಲಾಗಿದ್ದರೂ ಮೀನು ಮಾರಾಟದ ಚಟುವಟಿಕೆಗಳು ಜೂ. 8ರವರೆಗೆ ನಡೆದಿತ್ತು. ಪ್ರತಿ ವರ್ಷ ಮೇ 31ರಿಂದ ಯಾಂತ್ರಿಕೃತ ಮೀನುಗಾರಿಕೆ ಮುಕ್ತಾಯಗೊಳ್ಳುತ್ತಿದೆ. ಈ ಬಾರಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಾ. 20ರ ಬಳಿಕ ಯಾಂತ್ರಿಕ ಮೀನುಗಾರಿಕೆಗೆ ನಿಷೇಧ ಹೇರಿತ್ತು. ಸುಮಾರು 2 ತಿಂಗಳುಗಳ ಕಾಲ ಮೀನುಗಾರಿಕೆ ನಡೆದಿಲ್ಲ. ಮೀನುಗಾರರ ಸಂಕಷ್ಟವನ್ನು ಅರಿತ ಕೇಂದ್ರ ಮತ್ತು ರಾಜ್ಯ ಸರಕಾರ ಜೂ. 14ರವರೆಗೆ ಅವಧಿಯನ್ನು ವಿಸ್ತರಿಸಿತ್ತು.

Advertisement

ಲಾಕ್‌ಡೌನ್‌ನಿಂದಾಗಿ ಮೀನುಗಾರ ಕಾರ್ಮಿಕರು ಊರಿಗೆ ಹೋಗಿದ್ದರಿಂದ ಮಲ್ಪೆ ಬಂದರಿನಲ್ಲಿ ಕಾರ್ಮಿಕರ ಕೊರತೆ ಇತ್ತು. ಎಲ್ಲ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿದ್ದರಿಂದ ಬೋಟ್‌ಗಳನ್ನು ತೆರವುಗೊಳಿಸುವುದು ಕೂಡ ಕಷ್ಟ ಸಾಧ್ಯವಾಗಿದ್ದು, ಸುಮಾರು 350ರಿಂದ 400ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿತ್ತು. ಜಿಲ್ಲೆಯಲ್ಲಿ 4-5 ಮಂದಿ ಹೋಗುವ ಸಣ್ಣ ದೋಣಿಗಳು ಮೀನುಗಾರಿಕೆ ಚಟುವಟಿಕೆ ನಡೆಸುತ್ತಿವೆ. ನಾಡದೋಣಿ ವ್ಯಾಪ್ತಿಗೆ ಬರುವ 30-40 ಮಂದಿ ಇರುವ ಡಿಸ್ಕೋ ಮೀನುಗಾರಿಕೆ ಕಡಲಿನಲ್ಲಿ ತೂಫಾನ್‌ ಆದ ಬಳಿಕ ಮೀನುಗಾರಿಕೆಗೆ ತೆರಳಲಿವೆ. ಕೋವಿಡ್ ಮತ್ತು ಆಗಾಗ ಕಾಣಿಸಿದ ಚಂಡಮಾರುತಗಳಿಂದಾಗಿ ಒಟ್ಟಿನಲ್ಲಿ ವಾರ್ಷಿಕ 10 ತಿಂಗಳಲ್ಲಿ ಕನಿಷ್ಠ 5 ತಿಂಗಳು ಕೂಡ ಉತ್ತಮ ಮೀನುಗಾರಿಕೆ ನಡೆದಿಲ್ಲ. ಸುಮಾರು 500ರಿಂದ 600 ಕೋ.ರೂ. ವ್ಯವಹಾರ ನಷ್ಟವಾಗಿದೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1 ಕೆ.ಜಿ. ಬೂತಾಯಿ ಮೀನಿಗೆ 250 ರೂ.!
ಬೂತಾಯಿ ಮೀನಿನ ದರ ಕೆ.ಜಿ.ಗೆ 250 ರೂ.ಗೆ ಏರಿಕೆಯಾಗಿ ಕೈಗೆಟುಕದಂತಾಗಿದೆ. ಇಷ್ಟು ದರವಿದ್ದರೂ ಬೂತಾಯಿ ಸಿಗುವ ಪ್ರಮಾಣ ಕಡಿಮೆ. ಕಳೆದ ವರ್ಷ ಈ ಅವಧಿಯಲ್ಲಿ ಪಾಂಪ್ಲೆಟ್‌ ಕೆ.ಜಿ.ಗೆ 600 ರೂ.ಗೆ ಸಿಗುತ್ತಿತ್ತು. ಈಗ 1,600 ರೂ. ದಾಟಿದೆ. ಟೈಗರ್‌ ಪ್ರೌನ್ಸ್‌ ಕೆ.ಜಿ.ಗೆ 350 ರೂ. ಇದ್ದುದು 500 ರೂ. ತಲುಪಿದೆ. ಏಡಿ ಕೆ.ಜಿ.ಗೆ 100 ರೂ. ಇದ್ದುದು 250 ರೂ., ಅಂಜಲು ಕೆ.ಜಿ.ಗೆ 400ರಿಂದ 750 ರೂ., ಸಿಲ್ವರ್‌ ಫಿಶ್‌ ಕೆ.ಜಿ.ಗೆ 200ರೂ. ನಿಂದ 350, ಬಂಗುಡೆ ಕೆ.ಜಿ.ಗೆ 250 ರೂ. ಇದ್ದುದು 350ರೂ.ಗೆ ಏರಿಕೆಯಾಗಿದೆ.

ಮೀನುಗಾರಿಕೆ ಸ್ಥಗಿತ
ಈ ಬಾರಿ ಯಾಂತ್ರಿಕ ಮೀನುಗಾರಿಕೆ ನಿಷೇಧದ ಅವಧಿಯನ್ನು ಪರಿಷ್ಕರಿಸಿ ಜೂ. 14ರ ವರೆಗೆ ಮೀನುಗಾರಿಕೆಗೆ ಸರಕಾರ ಅವಕಾಶ ಕೊಟ್ಟಿದೆ. ಮಲ್ಪೆ ಬಂದರಿನಲ್ಲಿ ಜೂ. 8ರಂದು ಮೀನುಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,21,479 ಮೆಟ್ರಿಕ್‌ ಟನ್‌ ಮೀನು ಸಂಗ್ರಹವಾಗಿದ್ದು, 1,0197 ಕೋ.ರೂ. ವಹಿವಾಟು ಆಗಿದೆ.
-ಶಿವ ಕುಮಾರ್‌, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ

ಸಬ್ಸಿಡಿ ಹಣವನ್ನಾದರೂ ನೀಡಲಿ
ಈ ಬಾರಿ ವರ್ಷ ಪೂರ್ತಿ ಸಮಸ್ಯೆಯ ಸರಮಾಲೆಯಲ್ಲೇ ಅವಧಿ ಕಳೆಯಿತು. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಮೀನುಗಾರರಿಗೆ ಗಾಯದ ಮೇಲೆ ಬರೆ ಎನ್ನುವಂತೆ ಮೂರು ತಿಂಗಳಿನಿಂದ ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿಯನ್ನು ಸ‌ಹ ಸರಕಾರ ನೀಡಿಲ್ಲ. ಸರಕಾರ ಕನಿಷ್ಠ ಸಬ್ಸಿಡಿ ಹಣವನ್ನಾದರೂ ನೀಡುವಂತಾಗಲಿ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next