ಮಲ್ಪೆ: ಮಲ್ಪೆಯ ಹನುಮಾನ್ ವಿಠೊಭ ಭಜನಾ ಮಂದಿರದ ಬಳಿ ನಡೆದ ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮ ಮತ್ತು ಸಂಬಂಧಪಟ್ಟ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ ಅಣಕು ಪ್ರದರ್ಶನ ಜೂ. 8ರಂದು ನಡೆಯಿತು.
ಕಾರ್ಯಾಚರಣೆ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಸುನಾಮಿ ಸೇರಿದಂತೆ ಯಾವುದೇ ಪ್ರಾಕೃತಿಕ ವಿಕೋಪದ ಸಂದರ್ಭ ಜಿಲ್ಲಾಡಳಿತ ಯಾವ ರೀತಿ ತುರ್ತು ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂಬುದನ್ನು ಪರಿಶೀಲಿಸಲು ಇದು ಸಹಕಾರಿ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಎದುರಿ ಸಲು ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಹೂಳು ತೆಗೆಯುವ ಕಾರ್ಯ, ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗದಂತೆ ತಡೆಯಲು ಮೆಸ್ಕಾಂ ವತಿಯಿಂದ ಈಗಾಗಲೇ ಮರಗಳ ಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ, ಅಗ್ನಿಶಾಮಕ, ಹೋಂ ಗಾರ್ಡ್, ಪೊಲೀಸ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ
ಅಧಿಕಾರಿ ಸಿಬಂದಿಗಳಿಗೆ ತುರ್ತು ಸಂದರ್ಭ ಕರ್ತವ್ಯ ನಿರ್ವಹಣೆಗೆ ಸದಾ ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಅಗತ್ಯವಿರುವ ಎಲ್ಲ ರಕ್ಷಣಾ ಉಪಕರಣಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ಪುರ್ನವಸತಿ ಕಲ್ಪಿಸಲು, ಸಂತ್ರಸ್ತರ ರಕ್ಷಣೆಗೆ ಅಗತ್ಯವಿರುವ ರಕ್ಷಣಾ ಉಪಕರಣ ವಿತರಿಸಲು ಈಗಾಗಲೇ ಕ್ರಮ ಕೈಗೊಂಡಿದೆ ಎಂದರು.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಡಿವೈಎಸ್ಪಿ ಜೈಶಂಕರ್, ಮಲ್ಪೆ ಠಾಣಾಧಿಕಾರಿ ಮಧು ಬಿ. ಇ., ಡಿಎಚ್‌ಒ ಎಂ.ಜಿ. ರಾಮ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಜಿಲ್ಲಾ ಅಗ್ನಿಶಾಮಕ ಇಲಾಖೆ ಅಧಿಕಾರಿ ವಸಂತ ಕುಮಾರ್, ಹೋಂ ಗಾರ್ಡ್ ನ ಸಹಾಯಕ ಕಮಾಂಡೆಂಟ್ ರಮೇಶ್ ಮತ್ತು ನಗರಸಭೆಯ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಉಡುಪಿ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಸುರೇಶ್ ಶೆಣ್ಯೆ , ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.