Advertisement

ಮಲ್ಪೆ ಮುಖ್ಯ ರಸ್ತೆ :ಇಲ್ಲಿ ಚರಂಡಿಯೇ ಮಾಯ…! 

06:15 AM Jun 04, 2018 | |

ಮಲ್ಪೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೆಂದ್ರವಾದ ಮಲ್ಪೆ ನಗರದ ಹೃದಯ ಭಾಗದಲ್ಲಿರುವ ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯಲು ಸಮರ್ಪಕ  ಚರಂಡಿ ವ್ಯವಸ್ಥೆ ಇಲ್ಲದೆ ಹಲವು ವರ್ಷಗಳಿಂದ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ.  ಅಲ್ಲಲ್ಲಿ 10 ಅಡಿಯಷ್ಟು ಉದ್ದದಲ್ಲಿ  ತುಂಡು ಚರಂಡಿ ಕಾಣಸಿಗುತ್ತವೆ. ಉಳಿದ ಕಡೆಯ ಚರಂಡಿಗಳು ಮಣ್ಣಿನಿಂದ ಮುಚ್ಚಿ ಹೋಗಿ ರಸ್ತೆಯಾಗಿ ಮಾರ್ಪಟ್ಟಿವೆ. ಈ ಸ್ಥಿತಿ ಎಷ್ಟೋ ವರ್ಷಗಳಿಂದ ಹಾಗೆಯೇ ಇದೆ. ಮಲ್ಪೆ – ಆದಿವುಡುಪಿ ರಸ್ತೆ ವಿಸ್ತರಣೆ ಯೋಜನೆ ಕೈಗೂಡದ ಹಿನ್ನೆಲೆಯಲ್ಲಿ ಇಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣ ಮಾಡುವ ಯೋಜನೆಯೂ ಬಾಕಿ ಉಳಿಯುವಂತಾಗಿದೆ .

Advertisement

ಸೊಳ್ಳೆ ಕಾಟ: ನಿತ್ಯ ಯಾತನೆ
ಹೂಳು ತುಂಬಿದ ಚರಂಡಿ, ಮಡುಗಟ್ಟಿ  ನಿಲ್ಲುವ ಕೊಳಚೆ ಸಹಿತ ಮಳೆ ನೀರು, ಜತೆಗೆ ಸೊಳ್ಳೆ  ಕಾಟದಿಂದಾಗಿ ಅಂಗಡಿ ಮುಂಗಟ್ಟುಗಳ ಮಂದಿ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಸಿಂಡಿಕೇಟ್‌ ಬ್ಯಾಂಕ್‌, ಯುಬಿಎಂ ದೇವಾಲಯದ ರಸ್ತೆಯ ಬದಿಯ ತೋಡಿನಲ್ಲೂ  ಕಲ್ಲು, ಹುಲ್ಲು ತುಂಬಿಕೊಂಡು ನೀರಿನ ಹರಿವಗೆ ತಡೆಯೊಡ್ಡಿದೆ. 

ಮಳೆಗಾಲದಲ್ಲಿ  ಚರಂಡಿಯ ಹೂಳೆತ್ತಿದರೆ ಅದೇ ಮಳೆ ನೀರಿನೊಂದಿಗೆ ಆ ಹೂಳು ಮತ್ತೆ ಚರಂಡಿ ಸೇರುತ್ತದೆ. ಹಾಗಾಗಿ ಮಳೆಗಾಲಕ್ಕೆ ಒಂದೆರಡು ತಿಂಗಳು ಮುನ್ನವೇ ಚರಂಡಿಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇಡಬೇಕು ಎನ್ನುವುದು ನಾಗರಿಕರ ಅಭಿಪ್ರಾಯ.

ಕೊಳಚೆ ನೀರೂ ತೋಡಿಗೆ
ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಂಭಾಗದಲ್ಲಿರುವ ಚರಂಡಿಗೆ ಸಮೀಪದ ಸಂಕೀರ್ಣಗಳಿಂದ ಕೊಳಚೆ ನೀರು ಹರಿದು ಬಂದು ಹೂಳಿನೊಂದಿಗೆ ಕಸಕಡ್ಡಿಯಿಂದ ಚರಂಡಿ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಳ್ಳುತ್ತಿವೆ.  ಶಾಲಾ ಕಾಲೇಜಿನ ಮಕ್ಕಳು ಈ ಕೊಳಚೆ ನೀರನ್ನೇ ತುಳಿದುಕೊಂಡು  ಹೋಗಿ ಶಾಲಾ ಅವರಣವನ್ನು ಪ್ರವೇಶಿಸಬೇಕಾಗಿದೆ. 

ಚರಂಡಿ ಹೂಳೆತ್ತಿದರೆ ಪರಿಹಾರ
10 ದಿನದ ಹಿಂದೆ ಇಲ್ಲಿ ಸುಮಾರು 10 ಅಡಿ ಉದ್ದಕ್ಕೆ ಮಾತ್ರ ಚರಂಡಿಯ ಹೂಳು ತೆಗೆದು ಹೋಗಿದ್ದಾರೆ. ಆ ಮೇಲೆ ಇದುವರೆಗೂ ಯಾರು  ಇತ್ತ ಮುಖ  ಮಾಡಿಲ್ಲ. ಮೊನ್ನೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಮೆಟ್ಟಿಲುಗಳವರೆಗೂ ಬಂದಿದೆ. ಶಾಲಾ ಮಕ್ಕಳು ರಸ್ತೆಯಲ್ಲಿ ನಡೆದಾಡುವುದು ಕಷ್ಟವಾಗಿದೆ. ಚರಂಡಿಯ ಹುಲ್ಲು ಸಹಿತ ಹೂಳೆತ್ತಿದರೆ ಪರಿಹಾರ ಕಾಣಬಹುದು.
– ವಾಸು ಸುವರ್ಣ,ಮಲ್ಪೆ

Advertisement

ಚರಂಡಿ ಹೂಳು ಶೀಘ್ರ ತೆರವು
ದ್ವಿಪಥ ರಸ್ತೆ ನಿರ್ಮಾಣ ಯೋಜನೆಯಿಂದಾಗಿ ಮುಖ್ಯರಸ್ತೆಯ ಚರಂಡಿ ನಿರ್ಮಾಣದ ಕಾರ್ಯ ಬಾಕಿ ಉಳಿದಿದೆ. ಹೆಚ್ಚಿನ ಕಡೆ ಚರಂಡಿ ತುಂಬಿರುವ ಹೂಳನ್ನು ತೆರವುಗೊಳಿಸಲಾಗುತ್ತಿದೆ.  ಶಾಲಾ ಮುಂಭಾಗದಲ್ಲಿ ರುವ  ಮುಖ್ಯರಸ್ತೆಯ ಅಡಿಭಾಗದಲ್ಲಿ ಅಡ್ಡವಾಗಿ ರಚಿಸಲಾದ ತೋಡಿನಲ್ಲಿ ಆಗಾಗ ಕಸ ತುಂಬಿಕೊಳ್ಳುವುದರಿಂದ ನೀರು ಹರಿದು ಹೋಗಲು ತಡೆಯಾಗುತ್ತಿದೆ.  ಸಮಸ್ಯೆ ಬಗ್ಗೆ ಗಮನಹರಿಸಿ ನಗರಸಭೆಯ ಮೂಲಕ ಚರಂಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಲಾಗುವುದು.
– ವಿಜಯ ಕುಂದರ್‌,  
ನಗರಸಭಾ ಸದಸ್ಯರು, ಮಲ್ಪೆ ಸೆಂಟ್ರಲ್‌ 

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next