Advertisement

Malpe Main Road : ಸಮರ್ಪಕ ಚರಂಡಿ ಇಲ್ಲ; ಮಳೆಗಾಲದಲ್ಲಿ ರಸ್ತೆಯಲ್ಲೇ ಹರಿಯುತ್ತದೆ ನೀರು

03:51 PM Jun 04, 2023 | Team Udayavani |

ಮಲ್ಪೆ: ಇನ್ನೇನು ಮಳೆಗಾಲ ಶುರುವಾಗಲು ದಿನಗಣನೆ ಶುರುವಾಗಿದ್ದು ಆಡಳಿತ ಮಳೆಗಾಲದ ಸ್ವಾಗತಕ್ಕೆ ಮಲ್ಪೆ ನಗರದಲ್ಲಿ ಯಾವುದೇ ಸಿದ್ದತೆಯನ್ನು ಕೈಗೊಂಡಂತೆ ಕಾಣುವುದಿಲ್ಲ. ಮುಖ್ಯವಾಗಿ ಇಲ್ಲಿನ ಹೃದಯ ಭಾಗದಲ್ಲಿನ ಚರಂಡಿಯಲ್ಲಿ ಹೂಳನ್ನು ತೆರವುಗೊಳಿಸಿಲ್ಲ ಎಂದು ನಾಗರಿಕರು ದೂರಿದ್ದಾರೆ.

Advertisement

ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವಾದ ಮಲ್ಪೆ ನಗರದ ಹೃದಯ ಭಾಗದಲ್ಲಿರುವ ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯುಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಹಲವು ವರ್ಷಗಳಿಂದ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ. ಇಲ್ಲಿ ನೆಪಕಷ್ಟೇ ಚರಂಡಿ ಇದೆ. ಮಳೆ ಬಂದಾಗ ಮಳೆ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗುವಂತೆ ಸಂಪರ್ಕ ಜಾಲ ಇಲ್ಲ. ಆದ್ದರಿಂದ ಮಳೆ ನೀರು ಚರಂಡಿ ತುಂಬಿ ರಸ್ತೆಯ ಮೇಲೆ ಹರಿದು ಹೋಗತ್ತದೆ. ಚರಂಡಿ ನೀರು ಇಂಗಿ ಹೋಗಬೇಕಾದ ಸ್ಥಿತಿ ಇದೆ. ಹೂಳು ತುಂಬಿದ ಚರಂಡಿ, ಮಡುಗಟ್ಟಿ ನಿಲ್ಲುವ ಕೊಳಚೆ ಸಹಿತ ಮಳೆ ನೀರು, ಜತೆ ಸೊಳ್ಳೆಗಳ ಕಾಟದಿಂದಾಗಿ ಅಂಗಡಿ ಮುಂಗಟ್ಟುಗಳ ಮಂದಿ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.

ವಿಸ್ತರಣೆಯೇ ಪರಿಹಾರ
ಮುಖ್ಯರಸ್ತೆಯ ಎರಡೂ ಕಡೆ ಅಲ್ಲಲ್ಲಿ ಚರಂಡಿಗಳು ಕಾಣುತ್ತಿವೆ. ಕೆಲವಡೆ ಚರಂಡಿಗಳು ಮಣ್ಣಿನಿಂದ ಮುಚ್ಚಿ ಹೋಗಿ ರಸ್ತೆಯಾಗಿ ಮಾರ್ಪಟ್ಟಿವೆ. ಎಷ್ಟೋ ವರ್ಷಗಳಿಂದ ಇಲ್ಲಿ ಇದೇ ಸ್ಥಿತಿ ಇದೆ. ಮಲ್ಪೆ ನಗರದಲ್ಲಿ
ಸಮರ್ಪಕವಾದ ಚರಂಡಿ ವ್ಯವಸ್ಥೆ ಆಗಬೇಕಾದರೆ ರಸ್ತೆಯ ವಿಸ್ತರಣೆಯಾದರೆ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಅಲ್ಲಿಯವರೆಗೆ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗಬೇಕು ಎನ್ನುತ್ತಾರೆ ಶಬರಿ ಪ್ರಿಂಟರ್ ಮಾಲಕ ರಮೇಶ್‌ ತಿಂಗಳಾಯ.

ಕೊಳಚೆ ನೀರನ್ನು ದಾಟಬೇಕು
ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ (ಫಿಶರೀಸ್‌) ಮುಂಭಾಗದಲ್ಲಿರುವ ಚರಂಡಿಗೆ ಸಮೀಪದ ಸಂಕೀರ್ಣಗಳಿಂದ ಕೊಳಚೆ ನೀರು ಹರಿದು ಬಂದು ಹೂಳಿನೊಂದಿಗೆ ಕಸಕಡ್ಡಿಯಿಂದ ಚರಂಡಿ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಳ್ಳುತ್ತಿದೆ. ಶಾಲಾ ಕಾಲೇಜಿನ ಮಕ್ಕಳು ಈ ಕೊಳಚೆ ನೀರನೇ° ತುಳಿದುಕೊಂಡು ಹೋಗಿ ಶಾಲಾ ಆವರಣವನ್ನು ಪ್ರವೇಶಿಸಬೇಕಾಗಿದೆ.

ಶೀಘ್ರದಲ್ಲಿ ಚರಂಡಿಯಲ್ಲಿರುವ ಮಣ್ಣಿನ ತೆರವು
ರಸ್ತೆಯ ಅಗಲೀಕರಣದ ಯೋಜನೆಯಿಂದಾಗಿ ಮುಖ್ಯರಸ್ತೆಯ ಚರಂಡಿ ನಿರ್ಮಾಣದ ಕಾರ್ಯ ಬಾಕಿ ಉಳಿದಿದೆ. ಹೆಚ್ಚಿನ ಕಡೆ ಚರಂಡಿ ತುಂಬಿರುವ ಹೂಳನ್ನು ತೆರವುಗೊಳಿಸಲಾಗುತ್ತಿದೆ. ಕಾರ್ಮಿಕ ಕೊರತೆಯಿಂದ ಕೆಲಸ ವಿಳಂಭವಾಗುತ್ತಿದೆ. ಅತೀ ಶೀಘ್ರದಲ್ಲಿ ಬಾಕಿ ಕಡೆ ಉಳಿದ ಚರಂಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಲಾಗುವುದು.
– ಎಡ್ಲಿನ್‌ ಕರ್ಕಡ,ನಗರಸಭಾ ಸದಸ್ಯರು, ಮಲ್ಪೆ ಸೆಂಟ್ರಲ್‌ ವಾರ್ಡ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next