ಮಲ್ಪೆ: ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಿಂದ ಮೀನು ಕಾರ್ಮಿಕನೊಬ್ಬನ ಹತ್ಯೆಯಾಗಿದೆ.
ಕೊಲೆಯಾದ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್ (35). ಹೊನ್ನಾವರ ತಾಲೂಕಿನ ಬೇಳೆಕೆರೆ ನಾಗರಾಜ್(26) ಕೊಲೆ ಆರೋಪಿ.
ಮೀನುಗಾರಿಕೆ ಮುಗಿಸಿ ಎ.13ರಂದು ಮಲ್ಪೆ ಬಂದರಿಗೆ ಆಗಮಿಸಿದ್ದು. ಬೋಟನ್ನು ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿದ್ದರು. ರಾತ್ರಿ ಬೋಟಿನಲ್ಲಿ ಇತರ ಕಲಾಸಿಗರಾದ ಉಮೇಶ ಮತ್ತು ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರ ಇಬ್ಬರು ಊಟ ಮಾಡಲು ಬೋಟಿನ ಕ್ಯಾಬಿನ್ ಒಳಗಡೆ ಲೈಟ್ ಹಾಕಿದರು. ಲೈಟ್ ಆಫ್ ಮಾಡುವ ವಿಚಾರದಲ್ಲಿ ನಾಗರಾಜ ಮತ್ತು ಮಹಾಂತೇಶ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶ್‌ಗೆ ಹಲ್ಲೆ ಮಾಡಿದ್ದು, ಕಬ್ಬಿಣದ ಗೇರ್ ರಾಡ್‌ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ.
ತಡೆಯಲು ಹೋದ ಇತರೆ ಮೀನು ಕಾರ್ಮಿಕ ಬರಮಪ್ಪಗೂ ನಾಗರಾಜ್ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಮಹಾಂತೇಶರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು.
ಎ.14ರಂದು ಮುಂಜಾನೆ 5ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ವರದಿಯಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.