Advertisement

ಮಲ್ಪೆ: ಸ್ವಾಗತ ನೀಡುತ್ತಿದೆ ಸರ್ಕಲ್‌ ಬಳಿಯಿರುವ ಕಿತ್ತು ಹೋದ ರಸ್ತೆ…!

12:19 AM Dec 12, 2022 | Team Udayavani |

ಮಲ್ಪೆ: ದೇಶ ವಿದೇಶಗಳ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ಸುಂದರ ಸಮುದ್ರ ವೀಕ್ಷಣೆಗೆಂದು ದಿನನಿತ್ಯ ರಾಜ್ಯ ಹಾಗೂ ಹೊರ ರಾಜ್ಯದ ಮಂದಿ ಅಸಂಖ್ಯೆಯಲ್ಲಿ ಅಗಮಿಸುತ್ತಾರೆ. ಆದರೆ ಈ ಬೀಚ್‌ ಆರಂಭದಲ್ಲಿರುವ ಸ್ವಾಗತ ಕಮಾನಿನ ಸಮೀಪ ಸರ್ಕಲ್‌ ಬಳಿ ಕಿತ್ತು ಹೋದ ರಸ್ತೆ ಮಾತ್ರ ಎಲ್ಲರಿಗೆ ಸ್ವಾಗತ ಕೋರುವಂತಿದೆ.

Advertisement

ಮಳೆಗಾಲದ ಮೊದಲೇ ಈ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿದೆ. ವರ್ಷ ಕಳೆದರೂ ಗುಂಡಿ ಮುಚ್ಚುವ ಕೆಲಸಗಳು ಮಾತ್ರ ಸಂಭಂದಪಟ್ಟ ಇಲಾಖೆಯಿಂದ ಆಗಿಲ್ಲ. ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಗಳಲ್ಲೇ ಜನರು ಪ್ರಯಾಸದ ಪ್ರಯಾಣ ಮಾಡಬೇಕು. ಕೋಡಿಬೆಂಗ್ರೆಯವರೆಗೂ ಬೀಚ್‌ ನೋಡಲು ವರ್ಷವಿಡೀ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದು ಕಡೆ ಸಮುದ್ರತೀರಕ್ಕೆ, ಇನ್ನೊಂದು ಕಡೆ ತೊಟ್ಟಂಗೆ ಹೋಗಲು ವಡಭಾಂಡೇಶ್ವರ ಸರ್ಕಲ್‌ ಆಗಿರುವುದರಿಂದ ಬೀಚ್‌ಗೆ ಹೋಗುವವರು ಸೇರಿದಂತೆ ಎಲ್ಲ ಬಸ್‌ಗಳು ಜನರನ್ನು ಇಲ್ಲೇ ಇಳಿಸಲು ನಿಲ್ಲಿಸುತ್ತದೆ.

ಪ್ರವಾಸೋದ್ಯಮದ ಹಿತ ಕಾಯುವಂತಹ ಮೂಲ ಸೌಕರ್ಯಗಳು ರಸ್ತೆಗಳು ಈ ಭಾಗದಲ್ಲಿ ಅಭಿವೃದ್ಧಿ ಯಾಗಬೇಕಿದೆ. ಮಾರ್ಗ ಸೂಚನಾ ಫಲಕ ಇಲ್ಲ ಈ ಸರ್ಕಲ್‌ನ ಪಶ್ಚಿಮ ಬದಿಯ ರಸ್ತೆ ಬೀಚ್‌ ಕಡೆಗೂ, ಪೂರ್ವ ಬದಿಯ ರಸ್ತೆ ತೊಟ್ಟಂ ಕಡೆಗೂ ಸಾಗುತ್ತದೆ. ಇಲ್ಲಿ ಸಮರ್ಪಕವಾದ ಮಾರ್ಗ ಸೂಚಕ ಫಲಕ ಇಲ್ಲದ ಕಾರಣ ಬೀಚ್‌ಗೆ ಹೋಗುವ ಬಹುತೇಕ ಪ್ರವಾಸಿಗರು ಈ ಸ್ಥಳದಲ್ಲಿ ಗೊಂದಲಕ್ಕೆ ಈಡಾಗುತ್ತಾರೆ. ಇಲ್ಲೊಂದು ಸಮರ್ಪಕ ಮಾರ್ಗ ಸೂಚಕ ಫಲಕವನ್ನು ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ತತ್‌ಕ್ಷಣ ದುರಸ್ತಿಗೆ ಮುಂದಾಗಬೇಕು
ಇಲ್ಲಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದರಿಂದ ಇಲ್ಲಿ ನಿತ್ಯಅಪಘಾತಗಳು ನಡೆಯುತ್ತಲೇ ಇದೆ. ಮುಖ್ಯವಾಗಿ ದ್ವಿಚಕ್ರ ಸವಾರರು ಸ್ಕಿಡ್ಡಾಗಿ ಬೀಳುತಿದ್ದಾರೆ. ಸಂಬಂಧಪಟ್ಟ ಆಡಳಿತ ಜನರ ಪ್ರಾಣದ ಜತೆ ಚೆಲ್ಲಾಟವಾಡದೇ ತತ್‌ಕ್ಷಣ ದುರಸ್ತಿಗೆ ಮುಂದಾಗಬೇಕು. -ಈಶ್ವರ್‌ ಮಲ್ಪೆ, ಸ್ಥಳೀಯ ಮುಳುಗು ತಜ್ಞ

ತಾತ್ಕಾಲಿಕ ಕ್ರಮ
ಲೋಕೋಪಯೋಗಿ ಇಲಾಖೆಯಿಂದ ಒನ್‌ ಟೈಮ್‌ ಗ್ರ್ಯಾಂಟ್‌ ಮೂಲಕ ವಡಭಾಂಡೇಶ್ವರ ಬಲರಾಮ ನಗರದಿಂದ ಕೊಳ ಶಿವಪಂಚಾಕ್ಷರಿ ಭಜನ ಮಂದಿರದವರೆಗೆ ರಸ್ತೆ ಕಾಮಗಾರಿ ನಡೆಯಲಿದ್ದು, ಪ್ರಸ್ತುತ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಸರ್ಕಲ್‌ ಬಳಿ ಕಿತ್ತು ಹೋದ ರಸ್ತೆಗೆ ತಾತ್ಕಾಲಿಕವಾಗಿ ತೇಪೆ ಕಾಮಗಾರಿ ನಡೆಸಲಾಗುವುದು.
-ಸುಮಿತ್ರಾ ನಾಯಕ್‌ ಅಧ್ಯಕ್ಷರು, ಉಡುಪಿ ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next