ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸೀವಾಕ್ ವೇ ಸಮೀಪ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಅನುದಾನದಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ಸುಂದರ ಕಲಾಕೃತಿಗಳೊಂದಿಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈಗಾಗಲೇ ಭರದಿಂದ ಕೆಲಸಗಳು ಸಾಗುತ್ತಿದೆ.
ಸುಮಾರು 600 ಮೀ. ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇಲ್ಲಿ ಪ್ರಮುಖವಾಗಿ ಜಟಾಯು ಪ್ರತಿಮೆ ಪ್ರವಾಸಿಗರನ್ನು ಆಕರ್ಷಿಸಲಿದೆ. ಸುಮಾರು 15 ಅಡಿಗಳ ಎತ್ತರವಿರುವ ಸಿಮೆಂಟ್ ಕಲಾಕೃತಿಯ ಜಟಾಯು ಪ್ರತಿಮೆಯನ್ನು ಕಲಾವಿದ ಪುರುಷೋತ್ತಮ ಅಡ್ವೆ ಅವರು ನಿರ್ಮಿಸಿದ್ದಾರೆ. ಈ ಪ್ರತಿಮೆಯನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ.
ಉಡುಪಿ ನಿರ್ಮಿತಿ ಕೇಂದ್ರವು ಸುಮಾರು 600 ಮೀ. ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದು, ಜಟಾಯು ಪ್ರತಿಮೆ ಜತೆಯಲ್ಲಿ ಪಾತಿದೋಣಿ ಮೀನುಗಾರಿಕೆಯ ಪ್ರತಿಕೃತಿ ಮತ್ತು ಮೀನುಗಾರಿಕೆ ದೋಣಿಯಲ್ಲಿ ದುಡಿಯುವ ಮೀನುಗಾರರ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.
ಯಕ್ಷಗಾನ ಶೈಲಿಯ ಕಲಾಕೃತಿಗಳ ಪ್ರವಾಸಿಗರ ಕಣ್ಮನವನ್ನು ಸೆಳೆಯಲಿದೆ. ಕಲಾ ಪ್ರದರ್ಶನಕ್ಕಾಗಿ 200-250 ಜನ ಕುಳಿತುಕೊಳ್ಳುವ ಅರ್ಧ ಚಂದ್ರಾಕಾರದ ಆ್ಯಂಫಿಥಿಯೇಟರ್, ಅಂದಾಜು 250 ವಾಹನಗಳ ನಿಲುಗಡೆಗೆ 50 ಸಾವಿರ ಚದರಡಿ ವಿಸ್ತೀರ್ಣದ ಪಾರ್ಕಿಂಗ್ ಪ್ರದೇಶ ನಿರ್ಮಿಸಲಾಗಿದೆ. ಪಕ್ಕದಲ್ಲಿ ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟಕ್ಕೆ ಸಂಬಂಧಿಸಿದಂತೆ, ಜಾರುಬಂಡಿ, ಸ್ಯಾಂಡ್‌ಪಿಟ್, ಕುಳಿತುಕೊಳ್ಳಲು ಕಲ್ಲುಬೆಂಚುಗಳು, ಲೈಟಿಂಗ್‌ಗಳನ್ನು ಅಳವಡಿಸಲಾಗುತ್ತಿದೆ.
ಲಾಕ್‌ಡೌನ್ ವೇಳೆ ಕಾಮಗಾರಿ ಆರಂಭಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಬೇಕಿತ್ತು. ಮಳೆಯ ಕಾರಣದಿಂದ ಕಾಮಗಾರಿಗೆ ಹಿನ್ನೆಡೆಯಾಗಿದೆ. ನವೆಂಬರ್ ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.
–
ಅರುಣ್ ಕುಮಾರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ