Advertisement

Malpe: ಸಂಪೂರ್ಣ ಕಿತ್ತು ಹೋದ ಕೊಡವೂರು-ಮೂಡುಬೆಟ್ಟು ಸೇತುವೆ ಬಳಿಯ ಸಂಪರ್ಕ ರಸ್ತೆ

05:03 PM Sep 26, 2024 | Team Udayavani |

ಮಲ್ಪೆ: ಉಡುಪಿ ನಗರಸಭೆ ಮೂಡುಬೆಟ್ಟು ವ್ಯಾಪ್ತಿಯ ಕೊಡವೂರಿನಿಂದ ಮೂಡುಬೆಟ್ಟು ಸಂಪರ್ಕ ಕಲ್ಪಿಸುವ ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು-ಗುಂಡಿಗಳೇ ನಿರ್ಮಾಣವಾಗಿವೆ. ಇದರಿಂದ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರು, ಸಾರ್ವಜನಿಕರು, ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ.

Advertisement

ಕೊಡವೂರು ಮೂಡುಬೆಟ್ಟು ಮೂಲಕ ಆದಿಉಡುಪಿ, ಉಡುಪಿಗೆ ಮುಖ್ಯ ರಸ್ತೆ ಇದಾಗಿದ್ದು ಇಲ್ಲಿನ ಸೇತುವೆಯಿಂದ 20 ಮೀಟರ್‌ ದೂರ ಇರುವ ರಸ್ತೆಯ ಡಾಮರು ಕಿತ್ತು ಹೋಗಿದೆ. ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು, ಜಲ್ಲಿಕಲ್ಲುಗಳು ತೇಲುತ್ತಿವೆ. ರಸ್ತೆ ತಗ್ಗುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಹೊಂಡಗಳಂತೆ ಕಾಣುತ್ತಿವೆ.

ಇಲ್ಲಿ ಕಡಿದಾದ ತಿರುವು ಇದೆ. ತಿರುವಿನಲ್ಲಿ ವೇಗವಾಗಿ ಬರುವ ವಾಹನ ಸವಾರರು ಇಲ್ಲಿ ಹೊಂಡಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ರಸ್ತೆಯಲ್ಲಿ ಪ್ರಯಾಣಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳುತ್ತಿದ್ದಾರೆ.

ಇಂದ್ರಾಣಿ ನದಿಗೆ ತಡೆಗೋಡೆ ನಿರ್ಮಿಸಿ
ಈ ರಸ್ತೆಯ ಪಕ್ಕದಲ್ಲೇ ಇಂದ್ರಾಣಿ ನದಿ ಹರಿಯುತ್ತಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ನೀರಿನ ಹರಿವು ಜಾಸ್ತಿಯಾಗಿ ಉಕ್ಕೇರಿ ಬಂದು ಪರಿಸರದ ಸುತ್ತ ತುಂಬಿಕೊಳ್ಳುತ್ತದೆ. ನದಿಯ ತಿರುವು ಈ ಭಾಗದಲ್ಲೆ ಇರುವುದರಿಂದ ಇಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿ ಮೇಲೆ ಬರುವುದು ಸಹಜ. ಮಾತ್ರವಲ್ಲದೆ ಇಲ್ಲಿ ರಸ್ತೆ ತಗ್ಗು ಪ್ರದೇಶದಲ್ಲಿರುವುದರಿಂದ ಯಾವಾಗಲೂ ನೀರು ತುಂಬಿ ರಸ್ತೆ ಹಾಳಾಗುವುದು ಸಾಮಾನ್ಯ. ಮುಖ್ಯರಸ್ತೆಯ ಸಮೀಪ ಇಂದ್ರಾಣಿ ನದಿಗೆ ಈ ಭಾಗದಲ್ಲಿ ಸುಮಾರು 200 ಮೀಟರ್‌ ಉದ್ದಕ್ಕೆ ತಡೆಗೊಡೆಯನ್ನು ನಿರ್ಮಿಸಿದರೆ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರಾದ ಬಾಲಕೃಷ್ಣ ಕೊಡವೂರು.

ಹೆಜ್ಜೆ ಹೆಜ್ಜೆಗೂ ಗುಂಡಿ
ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳಿಂದ ಕೂಡಿದೆ. ಇದರಿಂದ ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು.
-ಸತೀಶ್‌ ಕೋಟ್ಯಾನ್‌, ಸ್ಥಳೀಯರು

Advertisement

ಪ್ರಯತ್ನಿಸಲಾಗುತ್ತಿದೆ
ಇಲ್ಲಿನ ರಸ್ತೆ ದುರಸ್ತಿಗೆ 11 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದ್ದು ಟೆಂಡರ್‌ ಕರೆಯಲಾಗಿತ್ತು. ಈ ಮಧ್ಯೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಮರು ಟೆಂಡರ್‌ಗೆ ಹೋಗಿದೆ. ಇದೀಗ ನೀತಿ ಸಂಹಿತೆ ಇರುವುದರಿಂದಾಗಿ ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿದೆ. ಈ ಬಗ್ಗೆ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ.
-ಶ್ರೀಶ ಭಟ್‌ ಕೊಡವೂರು, ನಗರಸಭಾ ಸದಸ್ಯರು, ಮೂಡುಬೆಟ್ಟು ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next