Advertisement

“ಮಕ್ಕಳಲ್ಲಿ ಅಪೌಷ್ಠಿಕತೆ ತಡೆ: ತಿಂಗಳಲ್ಲಿ ವರದಿ ನೀಡಿ’

11:37 PM Oct 21, 2019 | Team Udayavani |

ಬೆಂಗಳೂರು: ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ಕಾಲ ಕಾಲಕ್ಕೆ ನೀಡಿರುವ ಆದೇಶಗಳನ್ನು ಪಾಲಿಸಿರುವ ಬಗ್ಗೆ ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ಕುರಿತಂತೆ ಬೆಳಗಾವಿ ಜಿಲ್ಲೆಯ ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್‌. ಪಾಟೀಲ್‌ ಅವರು 2011ರಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರ ಆಧರಿಸಿ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಆಗ, ಸರ್ಕಾರದ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿಂದತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಸಲ್ಲಿಸಲು ಕಾಲಾವಕಾಶಬೇಕು ಎಂದು ಕೋರಿದರು. ಅದಕ್ಕೆ, ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು. ಈ ಹಿಂದೆ ಸೆ.16ರಂದು ಈ ಅರ್ಜಿ ವಿಚಾರಣೆಗೆ ಬಂದಾಗ ನ್ಯಾ. ಎನ್‌.ಕೆ. ಪಾಟೀಲ್‌ ಸಮಿತಿ ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ವಿವರ ನೀಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಅದಕ್ಕೆ, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಕಾಣೆಯಾಗಿವೆ. ಆದ್ದರಿಂದ ಪ್ರಕರಣದ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದರು. ಆಗ ಈ ಕೇಸಿಗೆ ಸಂಬಂಧಪಟ್ಟ ಎಲ್ಲ ಕಡತಗಳನ್ನು ಸರ್ಕಾರದ ಪರ ವಕೀಲರಿಗೆ ನೀಡುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತ್ತು.

ಸಾರ್ವಜನಿಕ ಸಾರಿಗೆಗಳಲ್ಲಿ ಏರು ಧ್ವನಿ ಮ್ಯೂಸಿಕ್‌ ತಡೆ: ವರದಿ ಕೇಳಿದ ಹೈಕೋರ್ಟ್‌
ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಹಾಗೂ ರೈಲು ಸೇರಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರು ಮೊಬೈಲ್‌ ಫೋನ್‌ ಹಾಗೂ ಇತರ ಸಂಗೀತ ಸಾಧನಗಳಲ್ಲಿ “ಓಪನ್‌ ಸ್ಪೀಕರ್‌’ ಇಟ್ಟುಕೊಂಡು ಆಡಿಯೋ, ವಿಡಿಯೋ ಮ್ಯೂಸಿಕ್‌ ಕೇಳುವುದನ್ನು ನಿರ್ಬಂಧಿಸುವ ಬಗ್ಗೆ ನಿಯಮದ ಪ್ರಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ತಿಂಗಳಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಈ ಕುರಿತು ವಕೀಲ ಎಲ್‌. ರಮೇಶ್‌ ನಾಯಕ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಎದುರು ಸೋಮವಾರ ವಿಚಾರಣೆಗೆ ಬಂದಿತ್ತು.

Advertisement

ವಿಚಾರಣೆ ವೇಳೆ ಅರ್ಜಿದಾರ ರಮೇಶ್‌ ನಾಯಕ್‌ ವಾದ ಮಂಡಿಸಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರು ಮೊಬೈಲ್‌ ಫೋನ್‌ಗಳಲ್ಲಿ ಓಪನ್‌ ಸ್ಪೀಕರ್‌ ಇಟ್ಟುಕೊಂಡು ಏರು ಧ್ವನಿಯಲ್ಲಿ ಮ್ಯೂಸಿಕ್‌ ಕೇಳುವುದನ್ನು “ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 94 (1) (5)’ ಅನ್ವಯ ನಿರ್ಬಂಧ. ಆದರೆ, ಈ ಬಗ್ಗೆ ಸಾರಿಗೆ ಇಲಾಖೆ, ರೈಲ್ವೆ ಮಂಡಳಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಆಗ ನಿಯಮ ಪರಿಶೀಲಿಸಿದ ನ್ಯಾಯಪೀಠ, “ಈಗಾಗಲೇ ನಿಯಮ ಇದೆ, ಅದರನ್ವಯ ಈವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next