Advertisement

ಮಲ್ಯ ಯು.ಕೆ. ಆಸ್ತಿ ಜಪ್ತಿ ಮಾಡಿ

12:10 PM Jul 06, 2018 | |

ಲಂಡನ್‌/ಹೊಸದಿಲ್ಲಿ: ಎಸ್‌ಬಿಐ ಸೇರಿದಂತೆ 13 ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಉದ್ಯಮಿ ವಿಜಯ ಮಲ್ಯ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹೊಂದಿರುವ ಆಸ್ತಿ ವಶಕ್ಕೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ಅದರ ಮೂಲಕ ಬ್ಯಾಂಕ್‌ಗಳಿಗೆ ಬರಬೇಕಾಗಿರುವ ಬಾಕಿ ಪಡೆದುಕೊಳ್ಳಲೂ ಅವಕಾಶ ಮಾಡಿಕೊಟ್ಟಂತಾಗಿದೆ. 

Advertisement

ಇಷ್ಟು ಮಾತ್ರವಲ್ಲ, ಯು.ಕೆ.ಯ ಲೇಡಿವಾಕ್‌, ಕ್ವೀನ್‌ ಹೂ ಲೇನ್‌, ಟೆವಿನ್‌ ಮತ್ತು ಬ್ರಾಂಬ್ಲೆ ಲಾಡ್ಜ್ನಲ್ಲಿರುವ ಮಲ್ಯರ ನಿವಾಸಕ್ಕೆ ಪ್ರವೇಶಿಸಿ, ಶೋಧ ನಡೆಸಲು ತನಿಖಾಧಿಕಾರಿ ಮತ್ತು ಸಿಬ್ಬಂದಿಗೆ ಅನುಮತಿ ನೀಡಲಾಗಿದೆ. ಜತೆಗೆ ಅಲ್ಲಿರುವ ಮಲ್ಯರ ಸೊತ್ತುಗಳನ್ನು ವಶಪಡಿಸಿಕೊಳ್ಳಲೂ ಸಮ್ಮತಿಸಲಾಗಿದೆ. ಅದಕ್ಕೆ ಪ್ರತಿರೋಧ ಒಡ್ಡಿದಲ್ಲಿ ಕೊಂಚ ಬಲ ಪ್ರಯೋಗ ನಡೆಸಲೂ ಅನುಮತಿ ನೀಡಲಾಗಿದೆ.  ಈ ಬಗ್ಗೆ ಯು.ಕೆ. ಹೈಕೋರ್ಟ್‌ನ ವಾಣಿಜ್ಯ ವಿಭಾಗದ ಜಡ್ಜ್ ಬ್ರ್ಯಾನ್‌ ಜೂ.26ರಂದು ಆದೇಶ ನೀಡಿದ್ದು, ಈ ಅಂಶ ಗುರುವಾರವಷ್ಟೇ ಬೆಳಕಿಗೆ ಬಂದಿದೆ. ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಆಗುವ ಭೀತಿಯಲ್ಲಿರುವ ಉದ್ಯಮಿ ಮಲ್ಯ ವಿರುದ್ಧ ಹೈಕೋರ್ಟ್‌ ಆದೇಶ ಗದಾ ಪ್ರಹಾರ ನಡೆಸಿದಂತಾಗಿದೆ.

ಕಾನೂನು ಹೋರಾಟ ನಡೆಸಿದ ಬ್ಯಾಂಕ್‌ಗಳಿಗೆ ಅದರ ವೆಚ್ಚವಾಗಿ 1.8 ಕೋಟಿ ರೂ. ಮೊತ್ತವನ್ನು ಮಲ್ಯ ನೀಡಬೇಕು ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ. ಗಮನಾರ್ಹ ಅಂಶವೆಂದರೆ, ಮಲ್ಯ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಡ ಉಂಟಾಗಿರುವುದು ಐಡಿಬಿಐ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ. ಅದರಲ್ಲಿ ಯಶಸ್ವಿಯಾದರೆ, ಇತರ ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದ ತನಿಖೆಯೂ ವೇಗ ಪಡೆದುಕೊಳ್ಳಲಿದೆ. 

ಸದ್ಯ ಮಲ್ಯ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದಾರೆ. ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಅರ್ಜಿಯ ಬಗ್ಗೆ ಲಂಡನ್‌ನಲ್ಲಿರುವ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ನಲ್ಲಿ ಜು.31ರಂದು ವಿಚಾರಣೆ ನಡೆಯಲಿದೆ. ಲಂಡನ್‌ನ ಕ್ರೌನ್‌ ಪ್ರಾಸಿ ಕ್ಯೂಷನ್‌ ಸರ್ವಿಸ್‌ ಮಲ್ಯ  ವಂಚನೆ ಮಾಡಿರು ವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಈಗಾಗಲೇ ಹೇಳಿದೆ.

159 ಆಸ್ತಿ ಪತ್ತೆ: ಬೆಂಗಳೂರು ಪೊಲೀಸರು
ಇನ್ನೊಂದೆಡೆ, ಹೈಕೋರ್ಟ್‌ ಆದೇಶಕ್ಕೆ ಪೂರಕವಾಗಿ ಹೊಸದಿಲ್ಲಿಯಲ್ಲಿಯೂ ಉದ್ಯಮಿ ಮಲ್ಯಗೆ ಪ್ರತಿಕೂಲವಾಗುವ ಬೆಳವಣಿಗೆ ನಡೆದಿದೆ. ಮಲ್ಯಗೆ ಸೇರಿದ 159 ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. ಆದರೆ ಜಾರಿ ನಿರ್ದೇಶನಾಲಯದ ಮುಂಬೈ ಘಟಕ ಈಗಾಗಲೇ ಕೆಲವನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಬೆಂಗಳೂರು ಪೊಲೀಸರು ದೆಹಲಿಯ ಸ್ಥಳೀಯ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಜಾರಿ ನಿರ್ದೇಶನಾಲಯದ ಪರ ವಾದಿಸಿದ ಎನ್‌.ಕೆ.ಮಟ್ಟಾ, ಯಾವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕು ಎಂದು ಚೀಫ್ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ನ್ಯಾಯಾಧೀಶ ದೀಪಕ್‌ ಶೆರಾವತ್‌ ಮುಂದೆ ಅರಿಕೆ ಮಾಡಿಕೊಂಡಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ಯುನೈ ಟೆಡ್‌ ಬ್ರೂವರೀಸ್‌ನ ಕಾನೂನು ಸಲಹೆಗಾರರನ್ನು ಬೆಂಗಳೂರು ಪೊಲೀಸರು ಸಂಪರ್ಕಿಸಿ ದಾಗ, ಜಾರಿ ನಿರ್ದೇಶನಾಲಯದ ಮುಂಬೈ ಘಟಕ ಈ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ನೀಡಿದರು ಎಂದು ಕೋರ್ಟ್‌ಗೆ ನ್ಯಾಯವಾದಿ ಹೇಳಿದ್ದಾರೆ. ಅದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರು ಅ.11ರ ಒಳಗಾಗಿ ಹೊಸ ವರದಿ ಸಲ್ಲಿಸಲು ಅವಕಾಶ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next