ಮಹಾನಗರ: ಹಲವು ತಿಂಗಳುಗಳಿಂದ ಪಾಳು ಬಿದ್ದಿದ್ದ ಮಲ್ಲಿಕಟ್ಟೆ ಪಾರ್ಕ್‌ನ ಅಭಿವೃದ್ಧಿ ಕಾಮಗಾರಿ ಸದ್ಯ ಅರ್ಧಕ್ಕೆ ನಿಂತಿದ್ದು, ಪರಿಣಾಮ ಪಾರ್ಕ್ ಇದೀಗ ನಿರಾಶ್ರಿತರ ತಾಣವಾಗಿ ಮಾರ್ಪಾಡಾಗಿದೆ.
ಕೆಲವು ತಿಂಗಳ ಹಿಂದೆ ಪಾರ್ಕ್‌ನ ಮೊದಲನೇ ಹಂತದ ಕಾಮಗಾರಿ ಆರಂಭಗೊಂಡಿತ್ತು. ಸದ್ಯ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಪಾರ್ಕ್‌ನ ಸುತ್ತಲೂ ಆವರಣ ಗೋಡೆ ನಿರ್ಮಾಣ ವಾಗಿದ್ದರೂ ನಾಲ್ಕೂ ಕಡೆಯಿಂದ ಪಾರ್ಕ್ ಪ್ರವೇಶಿಸಬಹುದು. ಇದೇ ಕಾರಣಕ್ಕೆ ಈ ಪಾರ್ಕ್ ಕುಡುಕರ ತಾಣವಾಗುತ್ತಿದೆ. ಪಾರ್ಕ್‌ನ ಒಳಗಡೆ ನಿರ್ಲಕ್ಷ್ಯ ಕ್ಕೊಳಗಾಗಿದ್ದು, ಪ್ಲಾಸ್ಟಿಕ್, ಹಳಸಿದ ಆಹಾರಗಳು, ಎಲೆಗಳು ಎಲ್ಲೆಡೆ ಬಿದ್ದಿದೆ.
ಹಲವು ವರ್ಷಗಳಿಂದ ನಿರ್ಲಕ್ಷ್ಯ
ಈ ಪಾರ್ಕ್ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಪಾರ್ಕ್ ಒಳಗೆ ಗ್ರಂಥಾಲಯವಿದ್ದು, ಆಕರ್ಷಣೆ ಪಡೆದಿತ್ತು. ಆದರೆ ಇಲ್ಲಿನ ಪರಿಸ್ಥಿತಿಯಿಂದಾಗಿ ಸಾರ್ವ ಜನಿಕರು ಗ್ರಂಥಾಲಯ ಪ್ರವೇಶಕ್ಕೆ ತೊಂದರೆಯಾಗಿದೆ. ಸುತ್ತಮುತ್ತಲೂ ಗಿಡ-ಗಂಟಿ ಬೆಳೆದಿದ್ದು, ಕಲ್ಲು ಬೆಂಚುಗಳು ಮುರಿದಿದೆ. ಬೀದಿ ನಾಯಿಗಳಿಗೂ ಈ ಪಾರ್ಕ್ ಆವಾಸ ಸ್ಥಾನವಾಗಿದೆ. ಮಲ್ಲಿಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಪಾರ್ಕ್ ಇಲ್ಲದ ಕಾರಣ, ಮಲ್ಲಿಕಟ್ಟೆ ಪಾರ್ಕ್ ಅಭಿವೃದ್ಧಿಗೊಂಡರೆ ಸುತ್ತಲಿನ ಮಂದಿಯ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಈ ಪಾರ್ಕ್‌ನ ಮೊದಲನೇ ಹಂತದ ಪಾರ್ಕ್ ಕಾಮಗಾರಿ ಪಾಲಿಕೆಯ 14ನೇ ಹಣಕಾಸು ಯೋಜನೆಯಲ್ಲಿ ಈ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 14.30 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ಗೆ ಆವರಣ ಸಹಿತ ಪಾರ್ಕ್ ಒಳಾಂಗಣದ ಕೆಲವೊಂದು ಕಾಮಗಾರಿ ನಡೆದಿದೆ. ಈ ಹಿಂದಿನ ಯೋಜನೆಯ ಪ್ರಕಾರ ಎರಡನೇ ಹಂತದ ಕಾಮಗಾರಿಯಲ್ಲಿ ಪಾರ್ಕ್‌ನೊಳಗೆ ವಿಶೇಷವಾಗಿ ಆಕ್ಯುಪಂಕ್ಚರ್ ಟ್ರ್ಯಾಕ್ ನಿರ್ಮಾಣಗೊಳ್ಳಬೇಕಿದೆ. ಹುಲ್ಲುಹಾಸು, ಕುಳಿತುಕೊಳ್ಳಲು ಆಸನ, ಸಿಸಿ ಕೆಮರಾ ಸಹಿತ ಮೂಲ ಸೌಕರ್ಯಗಳ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಈ ಪಾರ್ಕ್‌ನೊಳಗೆ ಗ್ರಂಥಾಲಯವಿದ್ದು, ಅದಕ್ಕೆ ಹೊಸ ಸ್ಪರ್ಶ ನೀಡಲು ಚಿಂತನೆ ನಡೆಯುತ್ತಿದೆ.