ದೇವರಹಿಪ್ಪರಗಿ: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸ್ವಾಭಿಮಾನದ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನ ಗೆಲುವಿಗೆ ಸಹಕರಿಸಬೇಕೆಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮನವಿ ಮಾಡಿದರು.
ಪಟ್ಟಣದಲ್ಲಿ ಸೋಮವಾರ ಪಂಚಾಚಾರ್ಯರ ಕಲ್ಯಾಣ ಮಂಟಪದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಪಕ್ಷಗಳು ಆಂತರಿಕ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಮಾಡಿಕೊಳ್ಳುವ ನಿಟ್ಟಿನಲ್ಲಿದ್ದರು. ಅವಳಿ ಜಿಲ್ಲೆಯ ಸ್ವಾಭಿಮಾನಿ ಬಂಧುಗಳು, ಹಿತೈಷಿಗಳು ಚುನಾವಣೆಗೆ ನಿಲ್ಲಲು ನನಗೆ ಸಲಹೆ ನೀಡಿದರು. ನಾನು ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧವಲ್ಲ, ವ್ಯವಸ್ಥೆಯ ವಿರುದ್ಧ ಚುನಾವಣೆಗೆ ನಿಂತಿರುವೆ. ಈ ಹಿಂದೆ ಜಿಪಂ ಉಪಾಧ್ಯಕ್ಷನಿದ್ದಾಗ ಅವಳಿ ಜಿಲ್ಲೆ ಜನತೆಯ ಸೇವೆ ಮಾಡಿದ್ದೇನೆ. ಈ ಸಲ ತಮ್ಮೆಲ್ಲರ ಸಹಕಾರದಿಂದ ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದೇನೆ. ಅವಳಿ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಪ್ರತಿನಿಧಿಗಳು ಕೇವಲ ಬಣ್ಣದ ಮಾತಿಗೆ ಮರುಳಾಗದೇ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಹಕಾರ ನೀಡಬೇಕು ಎಂದರು. ಹಿರಿಯ ಪತ್ರಕರ್ತ ನಿಂಗಣ್ಣ ಕೊಂಡಗೂಳಿ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ಆಮಿಷಕ್ಕೆ ಯಾರೂ ಮಣಿಯುವುದಿಲ್ಲ. ಖಂಡಿತವಾಗಲು ಈ ಸಲ ಮಲ್ಲಿಕಾರ್ಜುನ ಲೋಣಿಯವರ ಗೆಲುವು ಆಗಲಿದೆ. ಅದಕ್ಕಾಗಿ ಪ್ರತಿಯೊಬ್ಬ ಪ್ರತಿನಿಧಿ ಮಲ್ಲಿಕಾರ್ಜುನ ಲೋಣಿಯವರಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.
ಜಗದೀಶ ಪಾಟೀಲ, ಶಾಂತಗೌಡ ಬಿರಾದಾರ, ಸುಧಾಕರ ಅಡಕಿ, ಚಾಂದಪಾಶಾ ಹವಾಲ್ದಾರ, ಸಂಗನಗೌಡ ಬಿರಾದಾರ, ರಾಜಕುಮಾರ ಬಸಿಂದಗೇರಿ, ಡಾ.ರಾಜು ಆಲಗೂರ, ಲಾಡ್ಲೇಮಶಾಕ ಚಟ್ಟರಕಿ ಮಾತನಾಡಿದರು.
ಇದಕ್ಕೂ ಮುಂಚೆ ಡಾ| ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ಥಳೀಯ ಸಂಸ್ಥಗಳ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ರಾಜು ಬಂಡೆ, ವಿನೋದ ಶಿರಶ್ಯಾಡ, ಈರಣ್ಣ ಗಾಣಿಗೇರ, ಶಿವು ಮೂಡಗಿ, ಶಿವು ಬಿರಾದಾರ, ಆನಂದ ಕಂಟಿಗೊಂಡ ಇದ್ದರು.