ಅನಂತನಾಗ್: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಇನ್ನೂ 20 ಸ್ಥಾನಗಳು ಹೆಚ್ಚು ಸಿಗುತ್ತಿದ್ದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಲು ಸಾಧ್ಯವಾಗುತ್ತಿತ್ತು. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು “ನಮ್ಮ ಒಕ್ಕೂಟ ಗೆದ್ದಿದ್ದರೆ ಹಲವು ಮಂದಿ ಬಿಜೆಪಿ ನಾಯಕರು ಜೈಲಿಗೆ ಹೋಗುವ ಪರಿಸ್ಥಿತಿ ಉಂಟಾಗುತ್ತಿತತ್ತು’ ಯಾರೊಬ್ಬರ ಹೆಸರು ಪ್ರಸ್ತಾಪಿಸದೆ ಹೇಳಿದ್ದಾರೆ.
“400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದವರೆಲ್ಲಾ ಎಲ್ಲಿ ಹೋದರು? ಅವರು 240ಕ್ಕೇ ಸೀಮಿತಗೊಂಡರು. ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಮೈತ್ರಿಯಿಂದಾಗಿ ಬಿಜೆಪಿ ಭೀತಿಗೊಂಡಿದೆ. ನಮ್ಮ ಒಕ್ಕೂಟಕ್ಕೆ 20 ಸ್ಥಾನ ಹೆಚ್ಚು ಸಿಗುತ್ತಿದ್ದರೆ ಕೆಲವರೆಲ್ಲ ಜೈಲು ಪಾಲಾಗುತ್ತಿದ್ದರು’ ಎಂದರು.
ಸರ್ವಾಧಿಕಾರಿ ಧೋರಣೆ:
ಖರ್ಗೆ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ “ಅವರ ಮಾತುಗಳು ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆಯನ್ನು ಪ್ರತಿನಿಧಿಸುತ್ತದೆ, ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಪರಂಪರೆಯನ್ನು ಮುಂದುವರೆಸಲು ಕಾಂಗ್ರೆಸ್ ಬಯಸುತ್ತದೆ’ ಎಂದು ಟೀಕಿಸಿದ್ದಾರೆ.