Advertisement
ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಬುಧವಾರ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ತಮ್ಮ ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್‌ಗೆ ಬೆಂಬಲ ಸೂಚಿಸುವ ಮೂಲಕ ಶಿಗ್ಗಾಂವಿ ಚುನಾವಣ ಕಣ ಚುರುಕುಗೊಳಿಸಿದ್ದಾರೆ. ಇನ್ನೊಂದು ಪ್ರಮುಖ ಕ್ಷೇತ್ರ ಚನ್ನಪಟ್ಟಣದಲ್ಲಿ ಬರೋಬ್ಬರು 31 ಅಭ್ಯರ್ಥಿಗಳು ಕಣದಲ್ಲಿ ಉಳಿದು ದಾಖಲೆ ನಿರ್ಮಾಣ ಮಾಡಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆ ಕಣ ಕಾವು ಜೋರಾಗಿದ್ದು, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ರಾಜ್ಯ ನಾಯಕರು ಬುಧವಾರ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಸಚಿವ ಸಂತೋಷ್ ಲಾಡ್, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ತುಕರಾಂ ಅವರನ್ನು ಬೆಂಬಲಿಸಿ ಎಂದು ಕೋರಿದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಸಂಡೂರಿನಲ್ಲಿ ಜನಬಲದ ಮೂಲಕ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸಬೇಕು, ತಪ್ಪು ಮಾಡಿದವರಿಗೆ ಪ್ರಜಾಪ್ರಭುತ್ವದಲ್ಲಿ ಸೋಲಿಸುವ ಮೂಲಕ ಶಿಕ್ಷೆ ಕೊಡಬೇಕು ಎಂದರು.
Related Articles
ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ವಿವಿಧ ಗ್ರಾಮಗಳಿಗೆ ಸುತ್ತಾಡಿ ಮತದಾರರ ಮನವೊಲಿಕೆ ಪ್ರಯತ್ನ ಮಾಡುತ್ತಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಬುಧವಾರ ಕಾಂಗ್ರೆಸ್ ಬೇಗುದಿ ಶಮನ ಮಾಡಲು ಬಂದಿದ್ದ ಸಚಿವ ಜಮೀರ್, ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಹಾಗೂ ಬಂಡಾಯವೆದ್ದಿದ್ದ ಅಜ್ಜಿಂಪೀರ್ ಖಾದ್ರಿ ಅವರನ್ನು ಜತೆಗೆ ಕರೆದುಕೊಂಡು ಕ್ಷೇತ್ರ ಸುತ್ತಾಡಿದರು.
Advertisement
ಇನ್ನೊಂದೆಡೆ ಬಿಜೆಪಿ ಕೂಡ ಅಬ್ಬರ ಪ್ರಚಾರ ಕೈಗೊಂಡಿತು. ಪುತ್ರನ ಗೆಲುವಿಗೆ ಟೊಂಕ ಕಟ್ಟಿರುವ ಬೊಮ್ಮಾಯಿ ದಂಪತಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಲಕೊಂಡ ಗ್ರಾಮದಲ್ಲಿ ಪ್ರಚಾರ ನಡೆಸಿದರೆ, ಪತ್ನಿ ಚನ್ನಮ್ಮ ಬೊಮ್ಮಾಯಿ ಹುಲಸೋಗಿ, ಹಿರೇಮಣಕಟ್ಟಿ, ಚಿಕ್ಕಮಣಕಟ್ಟಿ, ಕಬನೂರು, ಬನ್ನೂರು, ಮುಗಳಿ ಗ್ರಾಮಗಳಲ್ಲಿ ಮತಯಾಚಿಸಿದರು. ಅಭ್ಯರ್ಥಿ ಭರತ್ ಬೊಮ್ಮಾಯಿ ತಳ್ಳಿಹಳ್ಳಿ, ಹೊಸಳ್ಳಿ, ತೊಂಡುರು, ಮೇಳಾಗಟ್ಟಿ, ಹುರುಳಿಕೊಪ್ಪಿ ಸೇರಿ ಇತರೆಡೆ ಸುತ್ತಾಡಿ ಮತದಾರರ ಮನವೊಲಿಕೆ ಪ್ರಯತ್ನ ಮಾಡಿದರು.
ಮೈತ್ರಿ ನಾಯಕರ ಶಕ್ತಿ ಪ್ರದರ್ಶನಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣದಲ್ಲೂ ಚುನಾವಣ ಪ್ರಚಾರ ಬಿರುಸು ಪಡೆದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಹಲವೆಡೆ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಇನ್ನು ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿದ್ದು, ವಿಧಾನಸಭೆ ವಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಾ| ಸಿ.ಎನ್. ಮಂಜುನಾಥ್, ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ಸೇರಿ ಹಲವು ಮುಖಂಡರು ಪಾಲ್ಗೊಂಡಿದ್ದರು. ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಕೆಂಗಲ್ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು.