Advertisement

By-Election: ಇನ್ನು ಪ್ರಚಾರದ ಹಬ್ಬ; ಮತದಾನಕ್ಕೆ ಹತ್ತೇ ದಿನ 3 ಪಕ್ಷಗಳಿಗೂ ಪ್ರತಿಷ್ಠೆಯ ಪಣ

01:17 AM Nov 04, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಗ ದೀಪಾವಳಿ ಹಬ್ಬದ ಸಂಭ್ರಮ ಮುಗಿದಿದ್ದು, ಇನ್ನು ಚುನಾವಣ ಕಣ ರಂಗೇರಲಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರಕ್ಕೆ ಕೇವಲ 10 ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ 8 ದಿನ ಮಾತ್ರ ಉಳಿದಿವೆ. ಆಡಳಿತಾರೂಢ ಕಾಂಗ್ರೆಸ್‌ ಪಾಲಿಗೆ ಮೂರೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿವೆ.

Advertisement

ಈ ನಿಟ್ಟಿನಲ್ಲಿ ಘಟಾನುಘಟಿ ನಾಯಕರು ಇಂದಿನಿಂದ ಪ್ರಚಾರದ ಅಖಾಡಕ್ಕೆ ಧುಮುಕು ತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 2 ದಿನ ಶಿಗ್ಗಾಂವಿಯಲ್ಲಿ ಬಿಡಾರ ಹೂಡಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಚನ್ನಪಟ್ಟಣದಲ್ಲಿ ಬೀಡು ಬಿಡಲಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಚಾರಕ್ಕೆ ಇಳಿಯಲಿದ್ದಾರೆ.

ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಇನ್ನಿತರ ನಾಯಕರು ಪ್ರಚಾರ ಮಾಡಲಿದ್ದಾರೆ.

ಈಗಾಗಲೇ ಮೂರೂ ಪಕ್ಷಗಳು ತಮ್ಮ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿವೆ. ದೀಪಾವಳಿ ಹಬ್ಬ, ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಾಯಕರು ತೊಡಗಿಸಿಕೊಂಡಿದ್ದರಿಂದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಚುನಾವಣ ಬಿಸಿ ತುಸು ಕಡಿಮೆಯಾಗಿತ್ತು. ಆದರೆ ಸೋಮವಾರದಿಂದ ರಾಜಕೀಯ ಜಟಾಪಟಿ ಹೆಚ್ಚಾಗಲಿದೆ.

2 ದಿನ ಶಿಗ್ಗಾವಿಯಲ್ಲಿ ಸಿಎಂ ಠಿಕಾಣಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸತತ ಗೆಲ್ಲುವ ಮೂಲಕ ಬಿಜೆಪಿಯ ಭದ್ರಕೋಟೆಯಂತಿರುವ ಈ ಕ್ಷೇತ್ರದಲ್ಲಿ ಪುತ್ರ ಭರತ್‌ ಅವರನ್ನೇ ಬಿಜೆಪಿಯಿಂದ ಅಗ್ನಿಪರೀಕ್ಷೆಗೆ ಇಳಿಸಲಾಗಿದೆ. ಕ್ಷೇತ್ರಕ್ಕೆ ಸೋಮವಾರ ಸಿಎಂ ಸಿದ್ದರಾಮಯ್ಯ ಲಗ್ಗೆ ಇಡಲಿದ್ದು, 2 ದಿನ ಠಿಕಾಣಿ ಹೂಡಲಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲ ಸೃಷ್ಟಿಯಾಗಿ ಅಧಿಕೃತ ಅಭ್ಯರ್ಥಿ ಯಾಸಿರ್‌ ಖಾನ್‌ ಪಟಾಣ್‌ ವಿರುದ್ಧ ಅಜಂಪೀರ್‌ ಖಾದ್ರಿ, ರಾಜು ಕುನ್ನೂರ ಬಂಡೆದ್ದು ನಾಮಪತ್ರ ಸಲ್ಲಿಸಿದ್ದರು. ಕಣದಿಂದ ಖಾದ್ರಿ ಹಿಂದೆ ಸರಿದಿದ್ದು, ಕುನ್ನೂರ ಕಣದಲ್ಲೇ ಉಳಿದಿದ್ದಾರೆ. ಕಾಂಗ್ರೆಸ್‌ಗೆ ಒಳಏಟು ಭೀತಿ ಇದ್ದೇ ಇದೆ. ಖುದ್ದು ಸಿಎಂ ಅವರೇ ಕ್ಷೇತ್ರದಲ್ಲಿ 2 ದಿನ ಇರುವುದರಿಂದ ಈ ಸಮಸ್ಯೆಗಳೂ ಪರಿಹಾರ ಆಗುವ ಮುನ್ಸೂಚನೆ ಇದೆ.

Advertisement

ಇತ್ತ ಕೈ ಅಭ್ಯರ್ಥಿ ಯೋಗೇಶ್ವರ್‌ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಕೇಂದ್ರ ಸಚಿವ ವಿ. ಸೋಮಣ್ಣ ಒಂದು ಸುತ್ತಿನ ಪ್ರಚಾರ ನಡೆಸಿದ್ದು, ನವೆಂಬರ್‌ 6 ಮತ್ತು 11 ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ನವೆಂಬರ್‌ 8 ಮತ್ತು 9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿಖೀಲ್‌ ಪರ ಪ್ರಚಾರ ನಡೆಸಲಿದ್ದಾರೆ. ರವಿವಾರ ಮಾಜಿ ಡಿಸಿಎಂಗಳಾದ ಆರ್‌. ಅಶೋಕ್‌ ಹಾಗೂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಚನ್ನಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಸಂಡೂರಿನಲ್ಲಿ ಬಿವೈವಿ ಪ್ರಚಾರ
ಸಂಡೂರು ಕಾಂಗ್ರೆಸ್‌ ಗೆದ್ದಿದ್ದ ಕ್ಷೇತ್ರವೇ ಆದ್ದರಿಂದ ಶತಾಯಗತಾಯ ಇಲ್ಲಿ ಪಕ್ಷವನ್ನು ಗೆಲ್ಲಿಸಲೇಬೇಕಿದೆ. ಸಂಸದರ ಪತ್ನಿಯೇ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಪ್ರಚಾರ ಬಿರುಸುಗೊಳ್ಳಲಿದೆ. ಅತ್ತ ಬಿಜೆಪಿಯಿಂದ ಬಂಗಾರು ಹನುಮಂತು ಸ್ಪರ್ಧಾಕಣದಲ್ಲಿದ್ದು, ಕೈವಶವಾಗಿರುವ ಕ್ಷೇತ್ರವನ್ನು ಕಮಲ ಪಾಳೆಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಜೆಡಿಎಸ್‌ ಬೆಂಬಲದೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಲಿದೆ. ಸೋಮವಾರದಂದು ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ವಕ್ಫ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಧ್ಯಾಹ್ನದ ನಂತರ ಕುಡುತಿನಿಯಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಾರೆ. ತೋರಣಗಲ್ಲಿನಲ್ಲಿ ಮುಖಂಡರ ಸಭೆ ನಡೆಸಿ ಬೆಂಗಳೂರಿಗೆ ಮರಳಲಿದ್ದಾರೆ. ಮೈತ್ರಿ ಧರ್ಮ ಪಾಲನೆ ದೃಷ್ಟಿಯಿಂದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅದರಂತೆ ಸೋಮವಾರದ ಬಳಿಕ ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಲಿರುವ ಕುಮಾರಸ್ವಾಮಿ, ಭರತ್‌ ಬೊಮ್ಮಾಯಿ ಹಾಗೂ ಬಂಗಾರು ಹನುಮಂತ ಪರ ಮತಯಾಚನೆ ಮಾಡಲಿದ್ದಾರೆ.

ಯಾರು ಎಲ್ಲಿ ಪ್ರಚಾರ?
– ಶಿಗ್ಗಾಂವಿ- 2 ದಿನ ಶಿಗ್ಗಾಂವಿಯಲ್ಲಿ ಪ್ರಚಾರ
– ಡಿಸಿಎಂ ಡಿ.ಕೆ.ಶಿವಕುಮಾರ್‌- ಚನ್ನಪಟ್ಟಣ ಪ್ರವಾಸ
-ಶಿಗ್ಗಾಂವಿ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ
-ಸಂಡೂರು- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರವಾಸ

ಇಂದಿನಿಂದ ಚನ್ನಪಟ್ಟಣದಲ್ಲಿ
ದೇವೇಗೌಡರ ಪ್ರಚಾರ
ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ನಿಖಿಲ್‌ ಪರ ಪ್ರಚಾರಕ್ಕಾಗಿ ಸೋಮವಾರದಿಂದ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕೆ ಇಳಿಯಲಿದ್ದಾರೆ. ದಿನಕ್ಕೆ 4-5 ಪಂಚಾಯತ್‌ಗಳಲ್ಲಿ ಗೌಡರು ಪ್ರಚಾರ ನಡೆಸಲಿದ್ದಾರೆ. ಮತದಾನದ ಮುನ್ನಾದಿನದವರೆಗೆ ಅವರು ಪ್ರಚಾರ ನಡೆಸಲಿದ್ದಾರೆ. ಅವರೊಂದಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೂಡ ಪುತ್ರನ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ.

3 ಕ್ಷೇತ್ರಗಳಲ್ಲಿ 3.18 ಕೋಟಿ
ರೂ. ಮೌಲ್ಯದ ಅಕ್ರಮ ಪತ್ತೆ
ಬೆಂಗಳೂರು: ಉಪ ಚುನಾವಣೆಗೆ ಪ್ರಚಾರ ಬಿರುಸಾಗುತ್ತಿರುವಂತೆಯೇ ಅಕ್ರಮಗಳೂ ಹೆಚ್ಚುತ್ತಿವೆ. ಚುನಾವಣೆ ವೇಳಾಪಟ್ಟಿ ಘೋಷಣೆ ಆದ ದಿನದಿಂದ ರವಿವಾರದ ವರೆಗೆ 3.18 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆ ಹಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next