ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ‘ಏಕ ವ್ಯಕ್ತಿ ಏಕ ಹುದ್ದೆ’ ಎಂಬ ಉದಯಪುರ ನಿರ್ಣಯದಂತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಖರ್ಗೆ ಇಂದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಸುಮಾರು 30 ಕಾಂಗ್ರೆಸ್ ನಾಯಕರ ಬೆಂಬಲವನ್ನು ಪಡೆದಿರುವ ಖರ್ಗೆ, ಮುಂದಿನ ಅಧ್ಯಕ್ಷರಾಗುವುದು ಬಹತೇಕ ಖಚಿತವಾಗಿದೆ. ದೀಪೇಂದರ್ ಹೂಡಾ, ಸಲ್ಮಾನ್ ಖುರ್ಷಿದ್, ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್, ಮನೀಶ್ ತಿವಾರಿ, ಪೃಥ್ವಿರಾಜ್ ಚವಾಣ್ ಮತ್ತು ಇತರರು ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮೂವರು ಸ್ಪರ್ಧೆ ನಡೆಸುತ್ತಿದ್ದಾರೆ. ಖರ್ಗೆ ಜೊತೆಗೆ ಕೇರಳದ ನಾಯಕ ಶಶಿ ತರೂರ್ ಮತ್ತು ಜಾರ್ಖಂಡ್ ನ ಕೆಎನ್ ತ್ರಿಪಾಠಿ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ಟ್ರಕ್ : ಮೂವರು ಸ್ಥಳದಲ್ಲೇ ಸಾವು
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕೂಡಾ ಆರಂಭದಲ್ಲಿ ಅಧ್ಯಕ್ಷೀಯ ಚುನಾವಣೆ ರೇಸ್ ನಲ್ಲಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಸ್ಪರ್ಧೆಗೆ ಸೂಚಿಸಿದ ಬಳಿಕ ದಿಗ್ವಿಜಯ್ ಸಿಂಗ್ ಹಿಂದೆ ಸರಿದಿದ್ದಾರೆ.