ಚಿಕ್ಕಮಗಳೂರು: ಚುನಾವಣೆ ಫಲಿತಾಂಶದ ಬಳಿಕ ಪಕ್ಷದ ಚುನಾಯಿತ ಸದಸ್ಯರು ಮತ್ತು ಹೈಕಮಾಂಡ್ ಚರ್ಚಿಸಿ ದಲಿತ ಅಥವಾ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಯಿಂದ ಈ ದೇಶ ಕಟ್ಟಲು ಸಾಧ್ಯವಿಲ್ಲ. ಧರ್ಮ ಬೇರೆ, ರಾಜಕಾರಣ ಬೇರೆ. ಕಾಂಗ್ರೆಸ್ ಲಿಂಗಾಯತ ಅಸ್ತ್ರ, ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿ ಹೇಳಿಕೆ ನಿರಾಧಾರ. ನಮ್ಮ ಐಡಿಯಾಲಜಿ ಮತ್ತು ಸಿದ್ಧಾಂತ ಬಿಡುವುದಿಲ್ಲ. ಆದರ ಆಧಾರದ ಮೇಲೆ ಚುನಾವಣೆ ನಡೆಸುತ್ತೇವೆ. ಕಾಂಗ್ರೆಸ್ ಜಾತಿ, ಹಣಬಲದ ಆಧಾರದ ಮೇಲೆ ಯಾವತ್ತೂ ಟಿಕೆಟ್ ನೀಡಿಲ್ಲ. ಹಾಗಿದ್ದರೆ ನಾನು 9 ಬಾರಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಿದ್ದೇವೆ. ಎಲ್ಲರನ್ನೂ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುತ್ತೇವೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಗುತ್ತಿಗೆದಾರರು, ಮಠಾ ಧೀಶರು ಸೇರಿದಂತೆ ಅನೇಕರು ಈ ಸರ್ಕಾರದಲ್ಲಿ ಕಾಮಗಾರಿ, 40 ಪರ್ಸೆಂಟ್ ಸರ್ಕಾರಕ್ಕೆ ಕೊಡಬೇಕೆಂದು ಪ್ರಧಾನಿ ಮೋದಿ, ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಹೋರಾಟ ಮಾಡಿ ಅಸೆಂಬ್ಲಿಯಲ್ಲಿ ಧ್ವನಿ ಎತ್ತಿದೆ. ಆದರೆ, ಕೇಂದ್ರ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಳ್ಳ ಸರ್ಕಾರದ ಬಗ್ಗೆ ಸಾಕಾಗಿದೆ. ಎಂಎಲ್‌ಎಗಳನ್ನು ಕದ್ದುಕೊಂಡು ಹೋಗಿ ಸರ್ಕಾರ ರಚನೆ ಮಾಡುತ್ತಾರೆ. ಗೋವಾ ಸೇರಿದಂತೆ ಇತರೆಡೆಗಳಲ್ಲೂ ಕಳ್ಳ ಸರ್ಕಾರ ರಚನೆ ಮಾಡಿದ್ದಾರೆ. ಕಳ್ಳರ ಹಾವಳಿ ಜಾಸ್ತಿಯಾಗಿದ್ದು ಜನರು ಹುಷಾರಾಗಿರಬೇಕು. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ತರಬೇಕು.
–
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ