ದಾವಣಗೆರೆ: ಕೃಷಿ, ಎಪಿಎಂಸಿ ಹಾಗೂ ಅಗತ್ಯ ವಸ್ತುಗಳಿಗೆ ಸಂಬಂಧಿಸಿ ಮೋದಿ ಸರ್ಕಾರ ಜಾರಿಗೊಳಿಸುತ್ತಿರುವ ಮೂರು ಕಾನೂನುಗಳು ದೇಶದ ಕಪ್ಪು ಕಾನೂನುಗಳಾಗಿದ್ದು, ರೈತರ ಜತೆಗೆ ಜನವಿರೋಧಿಯೂ ಆಗಿವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಸಂಗ್ರಹ ಕಾಯ್ದೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ಪಕ್ಷದೊಳಗೆ ತೀರ್ಮಾನಿಸಿ, ಕಾಯ್ದೆ ವಿರೋಧಿಸುವ 18-20 ಸಣ್ಣ ಪಕ್ಷಗಳೊಂದಿಗೂ ಚರ್ಚಿಸಲಾಗುವುದು. ಈ ಬಗ್ಗೆ ಮುಂದಿನ ಸಂಸತ್ ಅಧಿವೇಶನದಲ್ಲಿ ಯಾವ ನಿಲುವು ತೆಗೆದುಕೊಂಡರೆ ಜನರ ರಕ್ಷಣೆಗೆ ಬರಬಹುದು ಎಂದು ನಿರ್ಧರಿಸಲಾಗುವುದು ಎಂದರು.
ಮಹಿಳೆಯರಿಗೆ ಮೋಸ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರಿಗೆ ಮೋಸ ಮಾಡಿದೆ. ಎರಡು ಖರೀದಿಸಿದರೆ ಒಂದು ಪುಕ್ಕಟೆ ಎನ್ನುವಂತೆ ಒಂದನ್ನು ಪುಕ್ಕಟ್ಟೆ ಕೊಟ್ಟು ಉಳಿದೆಲ್ಲವನ್ನು ದುಪ್ಪಟ್ಟು ಮಾಡಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದ್ದು, ಜಿಡಿಪಿ ಮೈನಸ್ 13ಕ್ಕೆ ಇಳಿದಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಮೋದಿ ಸರ್ಕಾರದ ಬಗ್ಗೆ ಜನರಿಗೆ ಈಗ ನಿಜ ಅರ್ಥ ಆಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಷ್ಟೇ ನಮ್ಮ ಕರ್ತವ್ಯ ಎಂದರು.
ಸರ್ಕಾರ ಕೆಡವಿದ್ದೇ ಸಾಧನೆ: ಐಟಿ, ಇಡಿ, ಸಿಬಿಐಗಳನ್ನು ಮುಂದಿಟ್ಟುಕೊಂಡು ಹೆದರಿಸಿ, ಬೆದರಿಸಿ, ಆಪರೇಶನ್ ಕಮಲ ಮಾಡಿ ಸರ್ಕಾರಗಳನ್ನು ಕೆಡವಿ, ತಮ್ಮ ಸರ್ಕಾರ ತಂದಿದ್ದೇ ಬಿಜೆಪಿ ಸಾಧನೆ. ಕಾಂಗ್ರೆಸ್ ಬಹುಮತವಿದ್ದ ಪುದುಚೇರಿ, ಗೋವಾ, ಮಧ್ಯಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿದ್ದ ಮೈತ್ರಿ ಸರ್ಕಾರವನ್ನೂ ಕೆಡವಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಲೋಕತಂತ್ರ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದರು.
ಉತ್ತರ ಭಾರತದವರಿಗಿಂತ ದಕ್ಷಿಣ ಭಾರತದವರು ಪ್ರಬುದ್ಧರು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಯವರು ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೋ ಗೊತ್ತಿಲ್ಲ. ಭೇಟಿಯಾದಾಗ ತಿಳಿದು ಪ್ರತಿಕ್ರಿಯಿಸುತ್ತೇನೆ ಎಂದರು.