Advertisement

ಮಾಲ್‌ಗೆ ಲಗ್ಗೆಯಿಟ್ಟ “ಗ್ರಾಮೀಣ ಹಬ್ಬ’

12:32 AM Oct 13, 2019 | Lakshmi GovindaRaju |

ಬೆಂಗಳೂರು: ಕೃಷಿ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ (ನಬಾರ್ಡ್‌) ಐದು ದಿನಗಳ “ಗ್ರಾಮೀಣ ಹಬ್ಬ- 2019′ ಏರ್ಪಡಿಸಿದ್ದು, ರಾಜಧಾನಿಯ ಮಾಲ್‌ನಲ್ಲಿ ಐದು ದಿನ ಕುಶಲಕರ್ಮಿಗಳಿಗೆ ಉಚಿತ ಮಳಿಗೆ ವ್ಯವಸ್ಥೆ ಮಾಡಿದೆ.

Advertisement

ಗ್ರಾಮೀಣ ಕೃಷಿ ಮತ್ತು ಕರಕುಶಲ ವಸ್ತುಗಳು ಕೇವಲ ಹಳ್ಳಿಗಾಡುಗಳಿಗೆ ಸೀಮಿತವಾಗಿರದೇ ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದ್ದು, ಅ.18ರಿಂದ 22ರವರಗೆ ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ನಡೆಯುವ ಮೇಳದಲ್ಲಿ 40 ಮಳಿಗೆಗಳಲ್ಲಿ 250ರಿಂದ 300 ಕರಕುಶಲ ವಸ್ತುಗಳು ಮಾರಾಟಕ್ಕೆ ಇರಲಿದ್ದು, 17 ಮಳಿಗೆ ಕರ್ನಾಟಕದ ಕರಕುಶಲಕರ್ಮಿಗಳು ಹಾಗೂ 23 ಮಳಿಗೆಗಳಲ್ಲಿ ವಿವಿಧ ರಾಜ್ಯದವರು ತಮ್ಮ ಭಾಗದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಿದ್ದಾರೆ.

ಈ ಮೇಳದಲ್ಲಿ ಅಮೇಜಾನ್‌ ರೀತಿಯ ಆನ್‌ಲೈನ್‌ ಮಾರುಕಟ್ಟೆ ಸೇರಿ ರಾಜ್ಯ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಭಾಗವಹಿಸಲಿದ್ದು, ಮಾರಾಟಗಾರರು ಮತ್ತು ಕಂಪನಿಗಳ ನಡುವೆ ಒಡಂಬಡಿಕೆ ಕೂಡ ಏರ್ಪಡಲಿದೆ. ಕೃಷಿ ಹಾಗೂ ಗ್ರಾಮೀಣಭಿವೃದ್ಧಿಯಲ್ಲಿ 37 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಬಾರ್ಡ್‌, ದೇಶಾದ್ಯಂತ 300ಕ್ಕೂ ಅಧಿಕ ಸ್ವಾಯತ್ತ ಸಂಸ್ಥೆಗಳು, 242ಕ್ಕೂ ಅಧಿಕ ಕೃಷಿ ಉತ್ಪನ್ನ ಕಂಪನಿಗಳು, 49 ಸಾವಿರ ಸ್ವಸಹಾಯ ಸಂಘಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಪೋಷಿಸುತ್ತಿದ್ದು, ಸಂಘಗಳ ಸದಸ್ಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಮೇಳ ಆಯೋಜಿಸಿದೆ.

ಏನೆಲ್ಲ ವಸ್ತುಗಳ ಮಾರಾಟ?: ಕರ್ನಾಟಕದ ಮೊಳಕಾಲ್ಮೂರು ಸೀರೆ, ಕಸೂತಿ, ಹ್ಯಾಂಡ್‌ಲೂಮ್ಸ್‌, ಲಂಬಾಣಿ ಸಮುದಾಯದ ಆಭರಣಗಳು, ಚನ್ನಪಟ್ಟಣದ ಬೊಂಬೆ, ಮೈಸೂರಿನ ವಿಶಿಷ್ಟ ರೋಸ್‌ವುಡ್‌ ಕಲಾಕೃತಿಗಳು, ಫೈಬರ್‌ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥ, ಸಾಂಬಾರು ಪದಾರ್ಥ, ಬಿದಿರಿನ ಉತ್ಪನ್ನ ಸೇರಿ ಹಲವು ಆಕರ್ಷಕ ವಸ್ತುಗಳು, ಛತ್ತಿಸ್‌ಗಢ, ಅಹಮದಾಬಾದ್‌, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಲಖನೌ, ಹರಿಯಾಣ, ಪಂಜಾಬ್‌, ಭೋಪಾಲ್‌, ಪಶ್ಚಿಮ ಬಂಗಾಳ, ಮಹರಾಷ್ಟ್ರ, ಒಡಿಶಾ ಸೇರಿ 21ಕ್ಕೂ ಅಧಿಕ ರಾಜ್ಯಗಳ ಕರಕುಶಲಕರ್ಮಿಗಳು ತಾವು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಕಳೆದ ವರ್ಷ ಜಯನಗರದಲ್ಲಿ ನಡೆದ ಗ್ರಾಮೀಣ ಹಬ್ಬದಲ್ಲಿ ಸುಮಾರು 40 ಲಕ್ಷ ರೂ. ಮೌಲ್ಯದ ವಸ್ತುಗಳು ಮಾರಾಟವಾಗಿದ್ದವು. ಹಾಗೇ ವಿವಿಧ ಕಂಪನಿಗಳು ರೈತರು ಮತ್ತು ಕಲಾವಿದರೊಡನೆ ಒಡಂಬಡಿಕೆ ಮಾಡಿಕೊಂಡಿದ್ದವು. ಪ್ರಸಕ್ತ ವರ್ಷ ನಬಾರ್ಡ್‌ನಿಂದ 18 ಲಕ್ಷ ರೂ. ವೆಚ್ಚದಲ್ಲಿ ಮೇಳ ಆಯೋಸಿದ್ದು, ಐದು ದಿನ ಮಳಿಗೆಗಳನ್ನು ಉಚಿತವಾಗಿ ನೀಡಲಾಗುವುದು.
-ಪಿ.ವಿ.ಎಸ್‌.ಸೂರ್ಯಕುಮಾರ್‌, ನಬಾರ್ಡ್‌ ಮುಖ್ಯ ವ್ಯವಸ್ಥಾಪಕ ನಿರ್ವಾಹಕ

Advertisement

ಮರದ ಕೆತ್ತನೆ, ಅಗರಬತ್ತಿ, ದೇವರ ಮಂಟಪ ತಯಾರಿಸುವ ನಮಗೆ ಮಾರುಕಟ್ಟೆ ಸಮಸ್ಯೆ ಇತ್ತು. ಕಳೆದ ವರ್ಷ ಮೇಳದಲ್ಲಿ ಭಾಗವಹಿಸಿದ್ದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರಸುತ ಮೂರು ಗುಂಪುಗಳಲ್ಲಿ 38 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ.
-ಸಿದ್ದರಾಜು, ಮೈಸೂರಿನ ಕುಶಲಕರ್ಮಿ

* ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next